ಬೆಂಗಳೂರು: ಗೃಹ ಸಚಿವ ಅರಗ ಜ್ಞಾನೇಂದ್ರ ಮನೆಗೆ ಎಬಿವಿಪಿ ಕಾರ್ಯಕರ್ತರ ಮುತ್ತಿಗೆ ವಿಚಾರವಾಗಿ ಪ್ರತಿಕ್ರಿಯಿಸಿದ ಬೆಂಗಳೂರು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಮಾಹಿತಿ ಸಂಗ್ರಹಿಸುವಲ್ಲಿ ಗುಪ್ತಚರ ಇಲಾಖೆ ವಿಫಲವಾಗಿದೆ ಎಂದು ಗೃಹ ಇಲಾಖೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಮೀಷನರ್ ಪ್ರತಾಪ್ ರೆಡ್ಡಿ, ಎಬಿವಿಪಿ ಕಾರ್ಯಕರ್ತರು ಮನವಿ ಪತ್ರ, ಮೌನ ಪ್ರತಿಭಟನೆ ಎಂದು ಬಂದಿದ್ದರು. ಗೃಹ ಸಚಿವರ ಮನೆ ಬಳಿ CAR ತುಕಡಿ ನಿಯೋಜಿಸಲಾಗಿತ್ತು. ಕಾರ್ಯಕರ್ತರು ಮೊದಲು ಶಾಂತಿಯಿಂದಲೇ ಇದ್ದರು. ನಂತರ ಬಲವಂತವಾಗಿ ಗೇಟ್ ತೆಗೆದು ಒಳನುಗ್ಗಿದ್ದಾರೆ. ಪೊಲೀಸ್ ಸಿಬ್ಬಂದಿಗಳನ್ನು ತಳ್ಳಿ ಈ ರೀತಿ ನುಗ್ಗಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ಕೆಲವೊಂದು ಮಾಹಿತಿ ಕಲೆ ಹಾಕಬೇಕಿತ್ತು. ಅದು ಆಗಿಲ್ಲ ಹಾಗಾಗಿ ಇದು ಗುಪ್ತಚರ ಇಲಾಖೆ ವಿಫಲತೆ ತೋರುತ್ತದೆ. ಈಗಾಗಲೇ ಹೆಚ್ಚುವರಿ ಆಯುಕ್ತರು ಭೇಟಿ ನೀಡಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಿದರು.