ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯಲ್ಲಿ ಪೋಕ್ಸೋ ನ್ಯಾಯಾಲಯ ಕೇವಲ 10 ದಿನಗಳಲ್ಲಿ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿದೆ. ಆರೋಪಿಯನ್ನು ದೋಷಿ ಎಂದು ತೀರ್ಮಾನಿಸಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಆರೋಪಿ ಭೂಪೇಂದ್ರ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಪಂಕಜ್ ಕುಮಾರ್ ಶ್ರೀವಾಸ್ತವ, 20,000 ರೂಪಾಯಿ ದಂಡವನ್ನೂ ಹಾಕಿದ್ದಾರೆ. ಆಗಸ್ಟ್ 13 ರಂದು ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆದಿತ್ತು. ಪ್ರತಾಪ್ಗಢ ಪೊಲೀಸ್ ವರಿಷ್ಠಾಧಿಕಾರಿ ಸತ್ಪಾಲ್ ಅಂತಿಲ್ ಪ್ರಕರಣದ ತನಿಖೆಯ ನೇತೃತ್ವ ವಹಿಸಿದ್ದರು.
ತಂಡಗಳಾಗಿ ಕಾರ್ಯಾಚರಣೆ ನಡೆಸಿದ ಖಾಕಿ ಪಡೆ ಆರೋಪಿ ಭೂಪೇಂದ್ರನನ್ನು ಸೆರೆಹಿಡಿದಿತ್ತು. ಅಪರಾಧ ನಡೆದ ದಿನ ಸಮಯ ವ್ಯರ್ಥ ಮಾಡದೆ ವಿಧಿವಿಜ್ಞಾನ ತಂಡವನ್ನು ಕರೆದು ಎಲ್ಲಾ ಪ್ರಮುಖ ಸಾಕ್ಷ್ಯಗಳನ್ನು ಸಂರಕ್ಷಿಸಲಾಯ್ತು. ನಂತರ ನಿಗದಿತ ಸಮಯದ ಚೌಕಟ್ಟಿನೊಳಗೆ, ಪ್ರಯೋಗಾಲಯದಿಂದ ಫಲಿತಾಂಶಗಳನ್ನು ಪಡೆಯಲಾಯ್ತು.
ಫೋರೆನ್ಸಿಕ್ ತನಿಖೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಸೆಪ್ಟೆಂಬರ್ 3 ರಂದು ಅತ್ಯಾಚಾರ, ಅಪಹರಣ, ಬಾಲಕಿಯನ್ನು ಮದುವೆಗೆ ಒತ್ತಾಯಿಸಿದ ಆರೋಪದಡಿಯಲ್ಲಿ ಚಾರ್ಜ್ಶೀಟ್ ಸಲ್ಲಿಸಲಾಯಿತು. ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 12 ರಂದು ಪ್ರಾರಂಭಿಸಿತ್ತು. ಎಲ್ಲಾ ಎಂಟು ಸಾಕ್ಷಿಗಳನ್ನು ಪರೀಕ್ಷಿಸಿ, ಆರೋಪಿ ಭೂಪೇಂದ್ರನನ್ನು ಸೆಪ್ಟೆಂಬರ್ 17 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಸಪ್ಟೆಂಬರ್ 22ರಂದು ತೀರ್ಪು ಪ್ರಕಟಿಸಿದೆ. ಆರೋಪಿ ಅಪ್ರಾಪ್ತನೆಂದು ಸಲ್ಲಿಸಿದ್ದ ದಾಖಲೆ ನಕಲಿ ಎಂಬುದು ಸಹ ಸಾಬೀತಾಗಿದೆ.