ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ, ಖ್ಯಾತ ನಟರ ಮಕ್ಕಳೂ ಡ್ರಗ್ಸ್ ಸೇವಿಸುತ್ತಿದ್ದಾರೆ. ಸಮಾಜ ಭವಿಷ್ಯದಲ್ಲಿ ಯಾವ ಮಟ್ಟಕ್ಕೆ ತಲುಪಲಿದೆ ಎಂಬುದನ್ನು ಯೋಚಿಸಬೇಕು ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾಣಿ ಡ್ರಗ್ಸ್ ಸೇವನೆ ದೃಢವಾಗಿದೆ ಎಂಬ ಎಫ್ಎಸ್ಎಲ್ ವರದಿ ಬಂದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂದ್ರಜಿತ್ ಲಂಕೇಶ್, ಇಂದಿಗೂ ಬೆಂಗಳೂರಿನಲ್ಲಿ ಡ್ರಗ್ಸ್ ಗೆ ಬೇಡಿಕೆ ಹೆಚ್ಚುತ್ತಿದೆ. ದುಬಾರಿ ಬೆಲೆಯ ಡ್ರಗ್ಸ್ ಗಳಿಗೆ ಬೇಡಿಕೆ ಇದೆ ಎಂಬ ಮಾಹಿತಿ ನನಗಿದೆ. ಜನ ಸಾಮಾನ್ಯರಿಗೆ ಈ ಬೆಲೆಯ ಡ್ರಗ್ಸ್ ಖರೀದಿ ಸಾಧ್ಯವಿಲ್ಲ. ಹೀಗಿರುವಾಗ ಪ್ರಭಾವಿಗಳ ಮಕ್ಕಳು ಇದರಲ್ಲಿ ಭಾಗಿಯಾಗಿದ್ದಾರೆ. ನಟರ ಮಕ್ಕಳು ಕೂಡ ಸೇವಿಸುತ್ತಿದ್ದಾರೆ ಎಂಬುದು ನಿಜ. ಆದರೆ ಹೆಸರು ಬಹಿರಂಗ ಮಾಡಲ್ಲ. ಸಿಸಿಬಿಗೆ ನನಗಿರುವ ಮಾಹಿತಿ ನೀಡಲು ಸಿದ್ಧ ಎಂದು ಹೇಳಿದರು.
ಟಿ-20 ವಿಶ್ವಕಪ್ ನಲ್ಲಿ ಈ ಆಟಗಾರ ಆಡೋದು ಅನುಮಾನ
ಡ್ರಗ್ಸ್ ಕೇಸ್ ಮೊದಲು ಬಯಲಿಗೆಳೆದಾಗ ಸ್ಯಾಂಡಲ್ ವುಡ್ ನ ಹಲವರು ಇಂದ್ರಜಿತ್ ಗೆ ಕೆಲಸವಿಲ್ಲ ಎಂದು ಟೀಕಿಸಿದ್ದರು. ನನಗಿರುವ ಮಾಹಿತಿಯನ್ನು ನಾನು ಸಿಸಿಬಿ ಮುಖ್ಯಸ್ಥರಿಗೆ ನೀಡಿದ್ದೆ. ಇಂದು ಹಲವು ಪ್ರಕರಣವನ್ನು ಭೇದಿಸಿ ಕೋಟ್ಯಂತರ ರೂಪಾಯಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದರು.
ದೊಡ್ಡ ದೊಡ್ಡವರ ಮಕ್ಕಳು ಈ ಮಾಫಿಯಾದಲ್ಲಿ ಭಾಗಿಯಾಗಿದ್ದಾರೆ ಇಡೀ ಸಮಾಜದ ದೃಷ್ಟಿಯಿಂದ ಹೋರಾಡುವ ಅಗತ್ಯವಿದೆ. ನಿಮ್ಮ ಮಕ್ಕಳು, ನಿಮ್ಮ ಮನೆಯವರೂ ಇಂತಹ ಜಾಲಕ್ಕೆ ಸಿಲುಕಿ ಬಲಿಯಾಗುತ್ತಿರಬಹುದು ಅದನ್ನು ತಪ್ಪಿಸಬೇಕಿದೆ. ಡ್ರಗ್ಸ್ ಮಾಫಿಯಾ ಮೂಲವನ್ನು ಹುಡುಕಬೇಕಿದೆ. ಆ ನಿಟ್ಟಿನಲ್ಲಿ ನನ್ನ ಹೋರಾಟ ಮುಂದುವರೆಸುತ್ತೇನೆ. ಗೃಹ ಸಚಿವರನ್ನು ಭೇಟಿಯಾಗಿ ನನಗಿರುವ ಮಾಹಿತಿ ತಿಳಿಸುತ್ತೇನೆ ಎಂದು ಹೇಳಿದರು.