ರಾಜ್ಯಸಭಾ ಚುನಾವಣಾ ಕಣ ರಂಗೇರಿರುವುದರ ಮಧ್ಯೆ ಅಡ್ಡ ಮತದಾನದ ಭೀತಿ ಕಾಡುತ್ತಿರುವ ಹಿನ್ನಲೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ತಮ್ಮ ಶಾಸಕರುಗಳನ್ನು ಹಿಡಿದಿಟ್ಟುಕೊಳ್ಳಲು ತಂತ್ರಗಾರಿಕೆ ನಡೆಸುತ್ತಿದ್ದಾರೆ.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ತಮ್ಮ ಪಕ್ಷದ ಶಾಸಕರೊಂದಿಗೆ ಹೋಟೆಲ್ ನಲ್ಲಿ ಬೀಡುಬಿಟ್ಟಿದ್ದು, ಮತದಾನಕ್ಕೆ ಶಾಸಕರೊಂದಿಗೆ ಅಲ್ಲಿಂದಲೇ ನೇರವಾಗಿ ಆಗಮಿಸಲಿದ್ದಾರೆನ್ನಲಾಗಿದೆ.
ಇದರ ಮಧ್ಯೆ ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಶ್ರೀನಿವಾಸ್ ಸ್ಪೋಟಕ ಹೇಳಿಕೆ ನೀಡಿದ್ದು, ಪಕ್ಷದ ಅಭ್ಯರ್ಥಿ ಕುಪೇಂದ್ರ ರೆಡ್ಡಿಯವರಿಗೆ ಮತ ನೀಡುವಂತೆ ಕುಮಾರಸ್ವಾಮಿಯವರಿಂದಾಗಲಿ ಅಥವಾ ಇತರೆ ಯಾವುದೇ ನಾಯಕರಿಂದ ಕರೆ ಬಂದಿಲ್ಲವೆಂದು ಹೇಳಿದ್ದಾರೆ.
ಅಲ್ಲದೇ ಜೆಡಿಎಸ್ ನವರು ಈಗಾಗಲೇ ಬೇರೊಂದು ಅಭ್ಯರ್ಥಿಯನ್ನು ಕ್ಷೇತ್ರದಲ್ಲಿ ಹುಡುಕಿಕೊಂಡಿದ್ದಾರೆ ಎನ್ನುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷ ತೊರೆಯುವ ಪರೋಕ್ಷ ಸೂಚನೆ ನೀಡಿದ್ದಾರೆ.