ಶಿವಮೊಗ್ಗ: ಭಜರಂಗದಳ ಕಾರ್ಯಕರ್ತ ಹರ್ಷ ಮೃತದೇಹದ ಮೆರವಣಿಗೆ ಶಿವಮೊಗ್ಗದ ಪ್ರಮುಖ ನಗರಳಲ್ಲಿ ನಡೆಯುತ್ತಿದ್ದು, ಮತ್ತೊಂದೆಡೆ ಹಲವೆಡೆಗಳಲ್ಲಿ ಉದ್ರಿಕ್ತರ ಗುಂಪು ಪದೇ ಪದೇ ಕಲ್ಲುತೂರಾಟ ನಡೆಸಿವೆ. ಜಿಲ್ಲೆಯಾದ್ಯಂತ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಶಿವಮೊಗ್ಗದ ವಿದ್ಯಾನಗರದಲ್ಲಿರುವ ರೋಟರಿ ಚಿತಾಗಾರದಲ್ಲಿ ಮೃತ ಹರ್ಷ ಅಂತ್ಯಕ್ರಿಯೆ ನಡೆಯಲಿದ್ದು, ಸುಮಾರು 5 ಕಿ.ಮೀ ವರೆಗೂ ಮೃತದೇಹದ ಮೆರವಣಿಗೆ ಸಾಗಲಿದೆ. ಮೆರವಣಿಗೆ ಸಂದರ್ಭದಲ್ಲಿ ಶಿವಮೊಗ್ಗದ ಹಲವೆಡೆಗಳಲ್ಲಿ ಉದ್ರಿಕ್ತರ ಗುಂಪು ಕಲ್ಲುತೂರಾಟ ನಡೆಸಿದ್ದು, ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದೆಡೆ ಸೀಗೆಹಟ್ಟಿಯಲ್ಲಿ ರಸ್ತೆ ರಸ್ತೆಯಲ್ಲಿ ಕಿಡಿಗೇಡಿಗಳು ತಲ್ವಾರ್, ದೊಣ್ಣೆಗಳನ್ನು ಹಿಡಿದು ನಿಂತಿದ್ದು, ಇನ್ನೊಂದೆಡೆ ಆಜಾದ್ ನಗರ, ಸಿದ್ದಯ್ಯ ರಸ್ತೆ ಸೇರಿದಂತೆ ಹಲವೆಡೆ ಕಲ್ಲುತೂರಾಟ ನಡೆಸಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಹರಸಾಹಸಪಡುತ್ತಿದ್ದು, ಕೆ.ಆರ್.ಪುರದ ಸಿದ್ದಯ್ಯ ರಸ್ತೆಯಲ್ಲಿ ಉದ್ರಿಕ್ತರ ಮೇಲೆ ಲಘು ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗ ನಡೆಸಿದ್ದಾರೆ.
ಆದಾಗ್ಯೂ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿಲ್ಲ. ಶಿವಮೊಗ್ಗದಾದ್ಯಂತ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.