ಮಹಾರಾಷ್ಟ್ರ ರಾಜಕಾರಣ ಕ್ಲೈಮ್ಯಾಕ್ಸ್ ಹಂತ ತಲುಪಿರುವ ಮಧ್ಯೆ ಶಿವಸೇನಾ ನಾಯಕ ಸಂಜಯ್ ರಾವತ್ ಅವರಿಗೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದೆ. ಭೂ ಅವ್ಯವಹಾರ ಹಗರಣದಲ್ಲಿ ಸಂಜಯ್ ರಾವತ್ ಭಾಗಿಯಾಗಿರುವ ಆರೋಪ ಹಿನ್ನೆಲೆಯಲ್ಲಿ ಈ ಸಮನ್ಸ್ ನೀಡಲಾಗಿದೆ.
ಮುಖ್ಯಮಂತ್ರಿ ಉದ್ದವ್ ಠಾಕ್ರೆ ಪರ ಗಟ್ಟಿಯಾಗಿ ನಿಂತಿರುವ ಕಾರಣಕ್ಕೆ ಸಂಜಯ್ ರಾವತ್ ಅವರಿಗೆ ಇಡಿ ಸಮನ್ಸ್ ನೀಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಮೂಲಕ ಸಂಜಯ್ ರಾವತ್ ಅವರಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯ ಅಧಿಕಾರಿಗಳನ್ನು ಬಳಸಿಕೊಳ್ಳುತ್ತಿದೆ ಎಂಬ ಆರೋಪ ಪ್ರತಿಪಕ್ಷಗಳಿಂದ ಕೇಳಿ ಬಂದಿದೆ.
ಇದರ ಮಧ್ಯೆ ಇಡಿ ನೋಟಿಸ್ ಗೆ ಪ್ರತಿಕ್ರಿಯಿಸಿರುವ ಸಂಜಯ್ ರಾವತ್, ಇದರಿಂದ ನನ್ನನ್ನು ಎದೆಗುಂದಿಸಲು ಸಾಧ್ಯವಿಲ್ಲ. ಬಾಳಾ ಸಾಹೇಬರ ಶಿವಸೈನಿಕರಾದ ನಾವು ಈಗ ದೊಡ್ಡ ಕಾಳಗ ನಡೆಸುತ್ತಿದ್ದೇವೆ. ನನ್ನ ತಲೆ ಕತ್ತರಿಸಿದರೂ ಸಹ ನಾನು ಗುವಾಹಟಿ ಹಾದಿ ಹಿಡಿಯುವುದಿಲ್ಲವೆಂದು ಹೇಳುವ ಮೂಲಕ ಇಡಿ ನೋಟೀಸ್ ಮೂಲಕ ತಮ್ಮನ್ನು ಮಣಿಸಲು ಸಾಧ್ಯವಿಲ್ಲವೆಂಬ ಸಂದೇಶ ಸಾರಿದ್ದಾರೆ.