ತಮ್ಮ ಸಹೋದರನ ಪುತ್ರ ಚಂದ್ರಶೇಖರ್ ಅವರದ್ದು ಪೂರ್ವ ನಿಯೋಜಿತ ಕೊಲೆ ಎಂದು ಗಂಭೀರ ಆರೋಪ ಮಾಡಿರುವ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ. ರೇಣುಕಾಚಾರ್ಯ, ಪೊಲೀಸರ ನಿರ್ಲಕ್ಷ್ಯದ ವಿರುದ್ಧವೂ ಹರಿಹಾಯ್ದಿದ್ದಾರೆ.
ಹೊನ್ನಾಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಮಗೆ ಒಂದು ವರ್ಷದಿಂದಲೂ ಬೆದರಿಕೆ ಕರೆಗಳು ಬರುತ್ತಿದ್ದು, ಈ ಕುರಿತು ದೂರು ಸಹ ನೀಡಲಾಗಿತ್ತು. ಆದರೆ ಈಗ ನಮ್ಮ ಪುತ್ರನ ಕೊಲೆಯಾಗಿದೆ. ಒಬ್ಬ ಶಾಸಕರ ಪುತ್ರನಿಗೇ ಈ ಗತಿಯಾದರೆ ಜನಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದರು.
ಅಲ್ಲದೆ ಚಂದ್ರಶೇಖರ್ ಪ್ರಯಾಣಿಸುತ್ತಿದ್ದ ಕಾರು ಕಾಲುವೆಯಲ್ಲಿ ಇರುವುದನ್ನು ನನ್ನ ಕ್ಷೇತ್ರದ ಜನತೆಯೇ ಡ್ರೋನ್ ಮೂಲಕ ಪತ್ತೆ ಹಚ್ಚಿದ್ದಾರೆ. ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.
ಚಂದ್ರಶೇಖರನನ್ನು ಅಪಹರಿಸಿ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ. ಪೊಲೀಸರು ಸೂಕ್ತ ತನಿಖೆ ನಡೆಸಿದರೆ ಹಂತಕರು ಸಿಕ್ಕಿ ಬೀಳುತ್ತಾರೆ ಎಂದು ಅವರು ಹೇಳಿದರು.