ಬೆಂಗಳೂರು: ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನನ್ನ ಹತ್ಯೆಗೆ ಸುಪಾರಿ ಕೊಟ್ಟಿದ್ದು ಬಯಲಾಗಿದೆ. ಓರ್ವ ಶಾಸಕನ ಹತ್ಯೆಗೆ ಸುಪಾರಿ ಕೊಡುತ್ತಾರೆ ಎಂದರೆ ಏನರ್ಥ ? ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಎಸ್.ಆರ್. ವಿಶ್ವನಾಥ್, ನಾನು ಯಾವತ್ತೂ ದ್ವೇಷದ ರಾಜಕಾರಣ ಮಾಡುವವನಲ್ಲ. ಗೋಪಾಲಕೃಷ್ಣ ನನ್ನ ಎದುರಾಳಿಯೂ ಅಲ್ಲ. ಅವರು ವೈಯಕ್ತಿಕವಾಗಿ ಏನೇ ಮಾಡಲಿ ಎದುರಿಸುತ್ತೇನೆ. ಆದರೆ ನನ್ನ ಹತ್ಯೆಗೆ ಸಂಚು ರೂಪಿಸಿ ಸುಪಾರಿ ಕೊಡುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿರುವುದು ಯಾಕೆ ? ಅವರನ್ನು ಎಪಿಎಂಸಿ ಅಧ್ಯಕ್ಷನನ್ನಾಗಿ ಮಾಡಿದ್ದು ನಾನೆ. ನನ್ನ ವಿರುದ್ಧ ಮೂರು ಬಾರಿ ಸ್ಪರ್ಧಿಸಿ ಸೋಲನುಭವಿಸಿದ್ದರು. ಆದರೂ ನಾನು ಯಾವತ್ತು ಅವರನ್ನು ಎದುರಾಳಿ ಎಂದು ನೋಡಿಲ್ಲ. ಆದರೆ ನನ್ನನ್ನೇ ಹತ್ಯೆ ಮಾಡುವಂತೆ ಕುಳ್ಳ ದೇವರಾಜ್ ಗೆ ಸುಪಾರಿ ಕೊಡಲು ಕಾರಣವಾದರೂ ಏನು ಎಂಬುದು ತಿಳಿಯುತ್ತಿಲ್ಲ ಎಂದು ಹೇಳಿದರು.
ಕುಳ್ಳ ದೇವರಾಜ್ ಕ್ಷಮಾಪಣೆ ಪತ್ರ ಕಳುಹಿಸಿದ್ದ. ಆಗಲೇ ನನಗೆ ವಿಷಯ ಗೊತ್ತಾಗಿದ್ದು. ನಿನ್ನೆ ಸಂಜೆ 7:30ರ ಸುಮಾರಿಗೆ ನನ್ನ ಮನೆಗೆ ಒಂದು ಕವರ್ ಬಂದಿತ್ತು. ಅದನ್ನು ಪರಿಶೀಲಿಸಿದಾಗ ಗೋಪಾಲಕೃಷ್ಣ ಎನ್ನುವವರು ಸುಪಾರಿ ಕೊಟ್ಟಿದ್ದಾರೆ ಎಂದು ತಿಳಿಸಲಾಗಿತ್ತು. ಅಲ್ಲದೇ ಕುಳ್ಳ ದೇವರಾಜ್ ಕ್ಷಮಾಪಣೆಯನ್ನು ಕೇಳಿದ್ದ. ನನ್ನ ವಿರುದ್ಧ ಸಂಚು ನಡೆಯುತ್ತಿದೆ ಎಂದು 15 ದಿನಗಳಿಂದ ಸಣ್ಣದೊಂದು ಅನುಮಾನವೂ ಇತ್ತು. ಆದರೆ ಈ ಬಗ್ಗೆ ನಾನು ನಿರ್ಲಕ್ಷ ಮಾಡಿದ್ದೆ. ನಿನ್ನೆ ಕ್ಷಮಾಪಣೆ ಪತ್ರ ಬರುತ್ತಿದ್ದಂತೆ ಖಚಿತವಾಗಿದ್ದು ತಕ್ಷಣ ಗೃಹ ಸಚಿವರಿಗೆ ಕರೆ ಮಾಡಿ ಈ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದೇನೆ ಎಂದರು.
ಓರ್ವ ಶಾಸಕನ ಹತ್ಯೆಗೆ ಸಂಚು ಮಾಡುತ್ತಾರೆ ಎಂದರೆ ಏನರ್ಥ? ನನ್ನ ಕ್ಷೇತ್ರದ ಜನರು ಕೂಡ ಶಾಕ್ ಆಗಿದ್ದಾರೆ. ಗೋಪಾಲಕೃಷ್ಣ ರಾಜಕೀಯವಾಗಿ ಜಿದ್ದಿಗೆ ಬರಲಿ ಎದುರಿಸುತ್ತೇನೆ. ಆದರೆ ಕೊಲೆ ಮಾಡುವಂತಹ ದ್ವೇಷ ಸಹಿಸಲ್ಲ. ವಿಪಕ್ಷ ನಾಯಕರು ಕೂಡ ಇಂಥವರನ್ನು ಸಮರ್ಥಿಸಿಕೊಳ್ಳಬಾರದು. ತನಿಖೆಗೆ ಆಗ್ರಹಿಸಬೇಕು ಎಂದರು. ಇಡೀ ಪ್ರಕರಣದ ಬಗ್ಗೆ ಕೂಲಂಕುಷ ತನಿಖೆ ನಡೆಯಲಿ. ನಿಧಾನವಾದರೂ ಸರಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.