ಬೆಂಗಳೂರು: ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ನ ಹಲವು ನಾಯಕರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಇದೀಗ ರಾಜ್ಯಸಭೆ ವಿಪಕ್ಷ ನಾಯಕ, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಸೋಂಕು ದೃಢಪಟ್ಟಿದೆ.
ಮೇಕೆದಾಟು ಯೋಜನೆಗೆ ಚಾಲನೆ ನೀಡಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಹೋಂ ಐಸೋಲೇಷನ್ ಆಗಿದ್ದಾರೆ. ಇದೇ ವೇಳೆ ಖರ್ಗೆ ಅವರ ಕಚೇರಿಯ ಮೂವರು ಸಿಬ್ಬಂದಿಗಳಿಗೂ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಹಿರಿಯ ನಾಯಕರಾದ ವೀರಪ್ಪ ಮೊಯ್ಲಿ, ಹೆಚ್.ಎಂ.ರೇವಣ್ಣ, ಮುಲ್ಲಜಮ್ಮ ಅವರಿಗೆ ಈಗಾಗಲೇ ಕೊರೊನಾ ಸೋಂಕು ತಗುಲಿದ್ದು, ಇದೀಗ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಕೋವಿಡ್ ದೃಢಪಟ್ಟಿದೆ. ಇದರ ಬೆನ್ನಲ್ಲೇ ಖರ್ಗೆ ಸಂಪರ್ಕದಲ್ಲಿದ್ದ ಹಾಗೂ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಇನ್ನಿತರ ಕೈ ಮುಖಂಡರಿಗೂ ಕೊರೊನಾತಂಕ ಶುರುವಾಗಿದೆ.