ಜಾರ್ಜ್ ಫ್ಲೋಯ್ಡ್ ಕೊಲೆ ಪ್ರಕರಣದ ಆರೋಪಿ ಮಿನ್ನೆಪೊಲಿಸ್ನ ಮಾಜಿ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ಗೆ ಕೋರ್ಟ್ 22.5 ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಈ ಮೂಲಕ ಅಮೆರಿಕದ ಜನತೆಗೆ ದಶಕಗಳ ಜನಾಂಗೀಯ ನಿಂದನೆ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.
ಕಳೆದ ವರ್ಷ ಜಾರ್ಜ್ ಫ್ಲಾಯ್ಡ್ ಕೊಲೆ ಸಂಭವಿಸಿದ ಬಳಿಕ ಅಮೆರಿಕದಲ್ಲಿ ಭಾರೀ ದೊಡ್ಡ ಗಲಭೆ ಉಂಟಾಗಿತ್ತು. ಅಮೆರಿಕದ ಬಹುತೇಕ ನಗರಗಳಲ್ಲಿ ದಂಗೆ ಏರ್ಪಟ್ಟಿತ್ತು.
46 ವರ್ಷದ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ರ ಕುತ್ತಿಗೆಯನ್ನ ಡೆರೆಕ್ ತಮ್ಮ ಮೊಣಕಾಲಿನಲ್ಲಿ ಸಿಲುಕಿಸಿಕೊಂಡು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. 9 ನಿಮಿಷ 29 ಸೆಕೆಂಡ್ಗಳ ಕಾಲ ಡೆರೆಕ್ರ ಮೊಣಕಾಲಿನ ನಡುವೆ ಒದ್ದಾಡುತ್ತಿದ್ದ ಫ್ಲಾಯಿಡ್ ಬಳಿಕ ಸಾವನ್ನಪ್ಪಿದ್ದರು.ಈ ಘಟನೆಯು ದಶಕಗಳ ಜನಾಂಗೀಯ ನಿಂದನೆಯ ಆಕ್ರೋಶವನ್ನ ಮತ್ತೆ ಹೆಚ್ಚು ಮಾಡಿತ್ತು. ಹೀಗಾಗಿ ಆಕ್ರೋಶಗೊಂಡ ಜನತೆ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು.
ಈ ಘಟನೆ ಸಂಬಂಧ ವಿಡಿಯೋ ಕೂಡ ವೈರಲ್ ಆಗಿತ್ತು. ವಿಡಿಯೋದಲ್ಲಿ ಆಫ್ರಿಕಾ ಮೂಲದ ಅಮೆರಿಕ ನಿವಾಸಿ ಫ್ಲಾಯ್ಡ್ ನನಗೆ ಉಸಿರಾಡಲು ಆಗುತ್ತಿಲ್ಲ ಎಂದು ಹೇಳುತ್ತಿರೋದು ಸ್ಪಷ್ಟವಾಗಿ ಕೇಳುತ್ತಿತ್ತು.
ಪ್ರಕರಣ ಸಂಬಂಧ ಬಹಳ ವರ್ಷಗಳ ಬಳಿಕ ಮೌನ ಮುರಿದ ಚೌವಿನ್, ಪ್ಲೋಯ್ಡ್ ಕುಟುಂಬಕ್ಕೆ ಸಂತಾಪ ಸೂಚಿಸಿದ್ರು. ಕಪ್ಪು ವ್ಯಕ್ತಿಯನ್ನ ಕೊಲೆ ಮಾಡಿದ ಆರೋಪದಡಿಯಲ್ಲಿ ಅಮೆರಿಕದ ಪೊಲೀಸ್ ಅಧಿಕಾರಿಗೆ ಇದುವರೆಗೆ ನೀಡಲಾದ ಅತ್ಯಂತ ಸುದೀರ್ಘ ಜೈಲುಶಿಕ್ಷೆ ಇದಾಗಿದೆ.
ಆದರೆ ಕೋರ್ಟ್ ನೀಡಿದ ಈ ಶಿಕ್ಷೆಯಿಂದ ಫ್ಲೋಯ್ಡ್ ಕುಟುಂಬಸ್ಥರು ಖುಷಿಯಾದಂತೆ ಕಂಡುಬರಲಿಲ್ಲ. ಏಕೆಂದರೆ ಫ್ಲಾಯ್ಡ್ ಪರ ವಕೀಲರು 30 ವರ್ಷಗಳ ಜೈಲು ಶಿಕ್ಷೆಗೆ ಬೇಡಿಕೆ ಇಟ್ಟಿದ್ದರು.
ಅಲ್ಲದೇ ಜೈಲಿನಲ್ಲಿ ಉತ್ತಮ ನಡವಳಿಕೆ ತೋರಿದಲ್ಲಿ 45 ವರ್ಷದ ಚೌವಿನ್ ತಮ್ಮ ಮುಕ್ಕಾಲು ಭಾಗ ಶಿಕ್ಷೆಯನ್ನ ಪೂರ್ತಿಗೊಳಿಸಿದ ನಂತರ ಅಂದರೆ 15 ವರ್ಷಗಳ ಜೈಲು ಶಿಕ್ಷೆ ಬಳಿಕ ಪೆರೋಲ್ ಮೂಲಕ ಜೈಲಿನಿಂದ ಹೊರಬರಬಹುದು ಎಂದು ಕೋರ್ಟ್ ಹೇಳಿದೆ.