ಜುಲೈ 11ರಂದು ಚೆನ್ನೈನಲ್ಲಿ ನಡೆದಿದ್ದ ಎಐಎಡಿಎಂಕೆ ಸಾಮಾನ್ಯ ಸಭೆಯಲ್ಲಿ ಓ. ಪನ್ನೀರ್ ಸೆಲ್ವಂ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾ ಮಾಡಲಾಗಿತ್ತು. ಅಲ್ಲದೇ ಇ. ಪಳನಿಸ್ವಾಮಿಯವರನ್ನು ನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು.
ಇದಕ್ಕೆ ತಡೆ ಕೋರಿ ಓ. ಪನ್ನೀರ್ ಸೆಲ್ವಂ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದು, ಅವರಿಗೆ ಈಗ ಬಿಗ್ ರಿಲೀಫ್ ಸಿಕ್ಕಿದೆ.
ಆದರೆ ಸಾಮಾನ್ಯ ಸಭೆಗೆ ಅವಕಾಶ ನೀಡಬಾರದೆಂದು ಕೋರಿ ಪನ್ನೀರ್ ಸೆಲ್ವಂ ಈ ಹಿಂದೆ ಸಲ್ಲಿಸಿದ್ದ ಮನವಿಯನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿತ್ತು.
ಆ ಬಳಿಕ ಪನ್ನೀರ್ ಸೆಲ್ವಂ ಮತ್ತೊಮ್ಮೆ ನ್ಯಾಯಾಲಯದ ಮೆಟ್ಟಿಲೇರಿದ್ದು ಇದೀಗ ಹಿಂದಿನಂತೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕೆಂದು ಮದ್ರಾಸ್ ಹೈಕೋರ್ಟ್ ಸೂಚನೆ ನೀಡಿದೆ.
ಸಾಮಾನ್ಯ ಸಭೆಯಲ್ಲಿ ಬೈಲಾ ಉಲ್ಲಂಘನೆ ಕುರಿತಂತೆ ನ್ಯಾಯಾಲಯದಲ್ಲಿ ಓ. ಪನ್ನೀರ್ ಸೆಲ್ವಂ ಪ್ರಶ್ನಿಸಿದ್ದರು. ಇದೀಗ ಹೊಸದಾಗಿ ಸಾಮಾನ್ಯ ಸಭೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ.
ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಮದ್ರಾಸ್ ಹೈಕೋರ್ಟ್ ತೀರ್ಪು ಹೊರ ಬೀಳುತ್ತಿದ್ದಂತೆ ಓ. ಪನ್ನೀರ್ ಸೆಲ್ವಂ ಅವರ ನಿವಾಸದ ಮುಂದೆ ಬೆಂಬಲಿಗರ ಸಂಭ್ರಮ ಮುಗಿಲು ಮುಟ್ಟಿದೆ.