ಚುನಾವಣಾ ಸಮಿತಿಯ ಜೊತೆ ಮಾತುಕತೆ ನಡೆಸಿರುವ ಉತ್ತರ ಪ್ರದೇಶದ ರಾಜಕೀಯ ಪಕ್ಷಗಳು ಸರಿಯಾದ ಸಮಯಕ್ಕೆ ವಿಧಾನಸಭಾ ಚುನಾವಣೆಯನ್ನು ನಡೆಸುವಂತೆ ಒತ್ತಾಯಿಸಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಹೇಳಿದ್ದಾರೆ.
ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಚುನಾವಣೆಯನ್ನು ಆಯೋಜಿಸುವ ನಿಮಿತ್ತ ಮುಂಬರುವ ವಿಧಾನಸಭಾ ಚುನಾವಣೆಯ ಸಿದ್ಧತೆಗಳನ್ನು ಪರಿಶೀಲನೆ ಮಾಡಲು ಭಾರತೀಯ ಚುನಾವಣಾ ಆಯೋಗವು ಮೂರು ದಿನಗಳ ಕಾಲ ಉತ್ತರ ಪ್ರದೇಶಕ್ಕೆ ಭೇಟಿ ನೀಡಿದೆ.
ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ನಮ್ಮನ್ನು ಭೇಟಿಯಾಗಿದ್ದಾರೆ. ಕೋವಿಡ್ 19 ಮಾರ್ಗಸೂಚಿಗಳ ಸಮೇತ ಸರಿಯಾದ ಸಮಯಕ್ಕೆ ಚುನಾವಣೆಗಳನ್ನು ನಡೆಸಬೇಕು ಎಂದು ನಮಗೆ ಹೇಳಿದ್ದಾರೆ ಅಂತಾ ಸುಶೀಲ್ ಚಂದ್ರ ಹೇಳಿದರು.
ಜನವರಿ 5ರಂದು ಮತದಾರರ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದ ಅವರು, ಮತದಾನದ ದಿನಾಂಕದಂದು ಬೆಳಗ್ಗೆ 8ರಂದು ಸಂಜೆ 6ರವರೆಗೆ ಮತದಾನ ನಡೆಯಲಿದೆ. ಎಲ್ಲಾ ಮತಗಟ್ಟೆಗಳಲ್ಲಿ ವಿವಿಪ್ಯಾಟ್ಗಳನ್ನು ಅಳವಡಿಸಲಾಗುವುದು. ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಸುಮಾರು 1 ಲಕ್ಷ ಮತಗಟ್ಟೆಗಳಲ್ಲಿ ಲೈವ್ ವೆಬ್ಕಾಸ್ಟಿಂಗ್ ಸೌಲಭ್ಯಗಳು ಲಭ್ಯವಿರುತ್ತದೆ ಎಂದು ಹೇಳಿದರು.
80 ವರ್ಷಕ್ಕಿಂತ ಮೇಲ್ಪಟ್ಟ ಜನರು, ಅಂಗವಿಕಲರು ಮತ್ತು ಕೋವಿಡ್ ಸೋಂಕಿತ ಮತದಾರರು ಮತಗಟ್ಟೆಗೆ ಬರಲು ಸಾಧ್ಯವಾಗದಿದ್ದರೆ, ಚುನಾವಣಾ ಆಯೋಗವು ಅವರ ಮನೆ ಬಾಗಿಲಿಗೆ ತಲುಪುತ್ತದೆ ಎಂದು ಸುಶೀಲ್ ಚಂದ್ರ ಹೇಳಿದ್ದಾರೆ.