ಅಮೆರಿಕಾ ಹಾಗೂ ಐರೋಪ್ಯ ರಾಷ್ಟ್ರಗಳ ಒಕ್ಕೂಟದ ವಿರೋಧದ ಮಧ್ಯೆಯೂ ರಷ್ಯಾ, ಉಕ್ರೇನ್ ಮೇಲೆ ಯುದ್ದ ಆರಂಭಿಸಿದೆ. ಇಂದು ಬೆಳಿಗ್ಗೆ (ಭಾರತೀಯ ಕಾಲಮಾನ) ಯಿಂದಲೇ ಉಕ್ರೇನ್ ಮೇಲೆ ಕ್ಷಿಪಣಿ, ಬಾಂಬ್ ದಾಳಿ ಆರಂಭಿಸಿರುವ ರಷ್ಯಾ ಈಗಾಗಲೇ ಹಲವು ನಾಗರಿಕರ ಸಾವಿಗೆ ಕಾರಣವಾಗಿದೆ ಎನ್ನಲಾಗಿದೆ.
ಉಕ್ರೇನ್ ಜೊತೆ ರಷ್ಯಾ ಆರಂಭಿಸಿರುವ ಯುದ್ದಕ್ಕೆ ಜಗತ್ತಿನ ಹಲವು ರಾಷ್ಟ್ರಗಳಿಂದ ತೀವ್ರ ಖಂಡನೆ ವ್ಯಕ್ತವಾಗಿದ್ದು, ಅಮೆರಿಕಾ, ಐರೋಪ್ಯ ರಾಷ್ಟ್ರಗಳು ರಷ್ಯಾ ಮೇಲೆ ಈಗಾಗಲೇ ಹಲವು ನಿರ್ಬಂಧಗಳನ್ನು ಹೇರಿವೆ. ಅಲ್ಲದೇ ಇನ್ನು ಮುಂದೆ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿಯೂ ಎಚ್ಚರಿಸಿವೆ.
ಇಷ್ಟಾಗಿಯೂ ಯಾರ ಮಾತಿಗೂ ಮಣಿಯದ ರಷ್ಯಾ ತನ್ನ ಯುದ್ದ ಮಾಡುವ ನೀತಿಗೆ ಬದ್ದವಾಗಿದೆ. ಹೀಗಾಗಿ ಮೂರನೇ ಮಹಾಯುದ್ದ ಆರಂಭವಾಗಬಹುದಾ ಎಂಬ ಆತಂಕ ಜಗತ್ತನ್ನು ಕಾಡುತ್ತಿದೆ.
ಇದರ ಮಧ್ಯೆ ನಾಟ್ಯೋ NATO (ವಿಶ್ವದ 29 ರಾಷ್ಟ್ರಗಳು ಒಟ್ಟುಗೂಡಿ ನಿರ್ಮಿಸಿಕೊಂಡಿರುವ ಅಂತಾರಾಷ್ಟ್ರೀಯ ಸಂಘಟನೆ) ಉಕ್ರೇನ್ ಮತ್ತು ರಷ್ಯಾದ ಗಡಿ ಭಾಗದಲ್ಲಿ ನೆಲ, ಜಲ ಹಾಗೂ ವಾಯು ಮಾರ್ಗಗಳಲ್ಲಿ ತನ್ನ ಪಡೆಗಳನ್ನು ನಿಯೋಜಿಸಿಕೊಳ್ಳಲು ಆರಂಭಿಸಿದೆ. ಈ ಕುರಿತು ನ್ಯಾಟೋ ಪ್ರಧಾನ ಕಾರ್ಯದರ್ಶಿ ಜನರಲ್ ಜೆನ್ಸ್ ಸ್ಟಾಲ್ಟ್ ಬರ್ಗ್ ಮಾಹಿತಿ ನೀಡಿದ್ದಾರೆ.
ಒಂದೊಮ್ಮೆ ರಷ್ಯಾ ರಾಜತಾಂತ್ರಿಕ ಮಾರ್ಗಗಳು ಮೂಲಕ ಮಾತುಕತೆಗೆ ಮುಂದಾಗದಿದ್ದರೆ ನ್ಯಾಟೋ ಪಡೆಗಳು ಉಕ್ರೇನ್ ಬೆಂಬಲಕ್ಕೆ ನಿಲ್ಲುವ ಸಾಧ್ಯತೆಯಿದ್ದು, ಹೀಗಾಗಿ ವಿಶ್ವದಲ್ಲಿ ಮೂರನೇ ಮಹಾಯುದ್ದದ ಕಾರ್ಮೋಡ ಮನೆ ಮಾಡಿದೆ.