ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್ ರಾಜ್ ಕುಮಾರ್ ವಿಧಿವಶರಾಗಿದ್ದಾರೆ. ಇಂದು ಬೆಳಿಗ್ಗೆ ಜಿಮ್ ಮಾಡುವಾಗ ಅಸ್ವಸ್ಥರಾಗಿದ್ದ ಪುನೀತ್ ರಾಜ್ ಕುಮಾರ್ ಅವರನ್ನು ಮೊದಲಿಗೆ ರಮಣಶ್ರೀ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಪರಿಸ್ಥಿತಿ ಗಂಭೀರವಾದ ಹಿನ್ನಲೆಯಲ್ಲಿ ವಿಕ್ರಮ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ವೈದ್ಯರ ನಿರಂತರ ಪ್ರಯತ್ನದ ನಡುವೆಯೂ ಪುನೀತ್ ಬಾರದ ಲೋಕಕ್ಕೆ ತೆರಳಿದ್ದಾರೆ.
ಇಂದು ಪುನೀತ್ ರಾಜ್ ಕುಮಾರ್ ಅವರ ಸಹೋದರ ಶಿವರಾಜ್ ಕುಮಾರ್ ಅವರ ʼಭಜರಂಗಿ 2ʼ ಚಿತ್ರ ಬಿಡುಗಡೆಯಾಗಿದ್ದು, ಶಿವಣ್ಣನವರ ಚಿತ್ರ ವೀಕ್ಷಿಸಲು ಪ್ರೇಕ್ಷಕರು ಮುಗಿಬಿದ್ದ ಸುದ್ದಿ ತಿಳಿದು ಪುನೀತ್ ಹರ್ಷಗೊಂಡಿದ್ದರೆಂದು ಹೇಳಲಾಗಿದೆ. ಜೊತೆಗೆ ಶಿವಣ್ಣ ಸೇರಿದಂತೆ ʼಭಜರಂಗಿ 2ʼ ಚಿತ್ರತಂಡವನ್ನು ಅಭಿನಂದಿಸಲು ಮುಂದಾಗಿದ್ದರೆನ್ನಲಾಗಿದೆ. ಇದರ ಮಧ್ಯೆ ಶಿವಣ್ಣ ಸೇರಿದಂತೆ ಬಹುತೇಕ ಕುಟುಂಬ ಸದಸ್ಯರು ‘ಭಜರಂಗಿ 2’ ಚಿತ್ರವನ್ನು ಪ್ರೇಕ್ಷಕರ ಜೊತೆಯಲ್ಲಿಯೇ ವೀಕ್ಷಿಸಿದ್ದರು. ಈ ವೇಳೆ ಪುನೀತ್ ಅನಾರೋಗ್ಯದ ಸುದ್ದಿ ತಿಳಿದು ಆಸ್ಪತ್ರೆಗೆ ದೌಡಾಯಿಸಿ ಬಂದಿದ್ದರು.
ವೈದ್ಯರು ಪುನೀತ್ ಅವರನ್ನು ಉಳಿಸಿಕೊಳ್ಳಲು ನಿರಂತರವಾಗಿ ಪ್ರಯತ್ನಿಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಪುನೀತ್ ರಾಜ್ ಕುಮಾರ್ ಅನಾರೋಗ್ಯದ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ದೌಡಾಯಿಸಿದ್ದ ಕುಟುಂಬ ಸದಸ್ಯರು, ಚಿತ್ರರಂಗದ ಗಣ್ಯರು, ಅಭಿಮಾನಿಗಳು ಚೇತರಿಕೆಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದರೂ ಫಲ ಕೊಡಲಿಲ್ಲ.
ಪುನೀತ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಕನ್ನಡ ಚಿತ್ರರಂಗ ಆಘಾತಕ್ಕೊಳಗಾಗಿದೆ. ಈ ಹಿಂದೆ ಚಿರಂಜೀವಿ ಸರ್ಜಾ ಅಕಾಲಿಕ ಮರಣವನ್ನಪ್ಪಿದಾಗಲೇ ದಿಗ್ಬ್ರಮೆಗೊಂಡಿದ್ದ ಕನ್ನಡ ಚಿತ್ರರಂಗ ಇದೀಗ ಪುನೀತ್ ರಾಜ್ ಕುಮಾರ್ ಅವರ ನಿಧನದಿಂದ ತೀವ್ರ ಶಾಕ್ ಗೊಳಗಾಗಿದೆ.
ಪುನೀತ್ ಆಸ್ಪತ್ರೆಗೆ ದಾಖಲಾದಾಗಿನಿಂದಲೂ ಪ್ರತಿ ಕ್ಷಣವೂ ಆರೋಗ್ಯ ಪರಿಸ್ಥಿತಿಯ ಮಾಹಿತಿ ಪಡೆಯುತ್ತಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಪುನೀತ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಸಚಿವ ಆರ್. ಅಶೋಕ್ ಸೇರಿದಂತೆ ಹಲವಾರು ಗಣ್ಯರು ಭೇಟಿ ನೀಡಿದ್ದಾರೆ.