ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗುವುದು ಅನುಮಾನವಾಗಿದ್ದು, ಮಿತ್ರ ಪಕ್ಷಗಳ ಜೊತೆ ಮೈತ್ರಿ ಅನಿವಾರ್ಯವಾಗಿದೆ. ಚುನಾವಣಾ ಪೂರ್ವಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಹಾಗೂ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಒಕ್ಕೂಟ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿದ್ದು, ಇದೀಗ ಫಲಿತಾಂಶದ ಬಳಿಕ ಈ ಲೆಕ್ಕಾಚಾರ ತಲೆಕೆಳಗಾಗಬಹುದಾ ಎಂಬ ಅನುಮಾನ ಮೂಡಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಬಿಜೆಪಿ ಕಣಕ್ಕಿಳಿದಿತ್ತಾದರೂ ಸ್ಪಷ್ಟ ಬಹುಮತ ಗಳಿಸಿದರೂ ಸಹ ಚುನಾವಣೆ ಸಂದರ್ಭದಲ್ಲಿ ತಾವು ಮಾಡಿಕೊಂಡಿದ್ದ ಮೈತ್ರಿಯಂತೆ ಸರ್ಕಾರ ರಚಿಸಿದ್ದರು. ಈ ಬಾರಿಯೂ ತಮಗೆ ಸ್ಪಷ್ಟ ಬಹುಮತ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ಭಾರಿ ನಿರಾಸೆಯಾಗಿದೆ. ಸರ್ಕಾರ ರಚನೆಗೆ ಮಿತ್ರ ಪಕ್ಷಗಳ ಮೇಲೆ ಅವಲಂಬನೆಯಾಗುವುದು ಅನಿವಾರ್ಯವಾಗಿದೆ.
ಇದರ ಮಧ್ಯೆ ಇಂದಿನ ಫಲಿತಾಂಶದಿಂದ ಉತ್ಸುಕಗೊಂಡಿರುವ ‘ಇಂಡಿಯಾ’ ಮೈತ್ರಿಕೂಟ ಸರ್ಕಾರ ರಚನೆಗೆ ಕಸರತ್ತು ಆರಂಭಿಸಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿದು ಈಗ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿರುವ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಹಾಗೂ ಚಂದ್ರಬಾಬು ನಾಯ್ಡು ನೇತೃತ್ವದ ಟಿ ಡಿ ಪಿ ಜೊತೆ ಮಾತುಕತೆಗೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಇಂದು ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ‘ಇಂಡಿಯಾ’ ಮೈತ್ರಿಕೂಟದ ಸಭೆ ನಡೆಯಲಿದ್ದು, ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.