ವಿದೇಶಿ ಮಾಧ್ಯಮಗಳ ಪ್ರಕಾರ ಭಾರತದ ನೆರೆ ರಾಷ್ಟ್ರ ಶ್ರೀಲಂಕಾದ ಬ್ಯಾಂಕುಗಳು ವೋಸ್ಟ್ರೋ ಖಾತೆಗಳೆಂದು ಕರೆಯಲ್ಪಡುವ ವಿಶೇಷ ರೂಪಾಯಿ ವಹಿವಾಟು ಖಾತೆಗಳನ್ನು ತೆರೆದಿವೆ ಎನ್ನಲಾಗ್ತಾ ಇದೆ.
ಅಂತರಾಷ್ಟ್ರೀಯ ವಹಿವಾಟುಗಳಿಗಾಗಿ ರೂಪಾಯಿಯನ್ನು ಬಳಸಲು ಶ್ರೀಲಂಕಾ ಭಾರತೀಯ ರಿಸರ್ವ್ ಬ್ಯಾಂಕ್‌ನ ಅನುಮೋದನೆಗಾಗಿ ಕಾಯುತ್ತಿದೆ ಎಂದು ಅಲ್ಲಿನ ಸೆಂಟ್ರಲ್ ಬ್ಯಾಂಕ್ ಈ ಹಿಂದೆಯೇ ಹೇಳಿತ್ತು. ಅದರ ಬೆನ್ನಲ್ಲೇ ಈ ಮಾಹಿತಿ ಲಭ್ಯವಾಗಿದೆ. ಶ್ರೀಲಂಕಾದಲ್ಲಿ ವಿದೇಶಿ ಕರೆನ್ಸಿಯಾಗಿ ರೂಪಾಯಿ ವಹಿವಾಟು ನಡೆಯಲಿದೆ.
ಸಾರ್ಕ್ ಪ್ರದೇಶದಲ್ಲಿ ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ಸುಗಮಗೊಳಿಸಲು ಮತ್ತು ಉತ್ತೇಜಿಸಲು ಶ್ರೀಲಂಕಾ ಆರ್.ಬಿ.ಐ.ಗೆ ವಿನಂತಿ ಮಾಡಿತ್ತು. ಇದರರ್ಥ ಶ್ರೀಲಂಕಾದ ನಾಗರಿಕರು ಈಗ ಭಾರತೀಯ ರೂಪಾಯಿಯನ್ನು ಭೌತಿಕ ರೂಪದಲ್ಲಿ ಹೊಂದಬಹುದು. ಶ್ರೀಲಂಕನ್ನರು ಮತ್ತು ಭಾರತೀಯರು ಪರಸ್ಪರ ಅಂತರಾಷ್ಟ್ರೀಯ ವಹಿವಾಟುಗಳಿಗೆ ಅಮೆರಿಕನ್ ಡಾಲರ್ ಬದಲಿಗೆ ಭಾರತೀಯ ರೂಪಾಯಿಗಳನ್ನು ಬಳಸಬಹುದು.
2022ರ ಜುಲೈನಿಂದಲೇ ಭಾರತ ಸರ್ಕಾರ ಡಾಲರ್‌ಗಳ ಕೊರತೆಯಿರುವ ದೇಶಗಳನ್ನು ತನ್ನ ರೂಪಾಯಿ ವಸಾಹತು ಕಾರ್ಯವಿಧಾನಕ್ಕೆ ತರಲು ಪ್ರಯತ್ನಿಸುತ್ತಿದೆ. ಶ್ರೀಲಂಕಾದಲ್ಲಿ ಭಾರತೀಯ ರೂಪಾಯಿಯನ್ನು ಕಾನೂನಾತ್ಮಕವಾಗಿ ಕರೆನ್ಸಿಯಾಗಿ ಗೊತ್ತುಪಡಿಸುವುದರಿಂದ ಅಮೆರಿಕನ್ ಡಾಲರ್‌ನ ಅಸಮರ್ಪಕ ಲಭ್ಯತೆಯ ನಡುವೆ, ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ದ್ವೀಪರಾಷ್ಟ್ರಕ್ಕೆ ಬೆಂಬಲ ಸಿಕ್ಕಂತಾಗಲಿದೆ.