ಕೇಂದ್ರ ಚುನಾವಣೆ ಆಯೋಗ, ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು ದಿನಾಂಕ ಘೋಷಿಸಿದ್ದು, ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಪ್ರಸ್ತುತ ಸರ್ಕಾರದ ಅವಧಿ ಮೇ 23 ಕ್ಕೆ ಅಂತ್ಯವಾಗಲಿದ್ದು, ಅಷ್ಟರಲ್ಲೇ ಹೊಸ ಸರ್ಕಾರ ರಚನೆಯಾಗಬೇಕಿದೆ. ಅಲ್ಲದೆ ಚುನಾವಣಾ ನೀತಿ ಸಂಹಿತೆ ಈ ತಕ್ಷಣದಿಂದಲೇ ಜಾರಿಯಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ನವದೆಹಲಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಕೇಂದ್ರ ಚುನಾವಣಾ ಆಯೋಗದ ಆಯುಕ್ತ ರಾಜೀವ್ ಕುಮಾರ್, ಕರ್ನಾಟಕದ 224 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮೇ 10 ರಂದು ಮತದಾನ ನಡೆಯಲಿದ್ದು, ಫಲಿತಾಂಶ ಮೇ 13 ರಂದು ಹೊರ ಬೀಳಲಿದೆ ಎಂದು ಹೇಳಿದರು.
ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಏಪ್ರಿಲ್ 13 ರಿಂದ ಆರಂಭವಾಗಲಿದ್ದು, ಏಪ್ರಿಲ್ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಅಂತಿಮ ದಿನಾಂಕವಾಗಿದ್ದು, ಮೇ 10 ರಂದು ಮತದಾನ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತರು ತಿಳಿಸಿದರು.
ಒಟ್ಟು 224 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಈಗಾಗಲೇ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳು ರಾಜ್ಯದಾದ್ಯಂತ ಪ್ರಚಾರ ಕಾರ್ಯ ನಡೆಸುತ್ತಿವೆ.