ಮುಂಬೈ: ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿಗೆ ದೊಡ್ಡ ಹೊಡೆತ ಬಿದ್ದಿದೆ. ಸಮಾಜವಾದಿ ಪಕ್ಷವು ಮೈತ್ರಿಯಿಂದ ಹೊರಬರಲು ನಿರ್ಧರಿಸಿದೆ.
ಸಮಾಜವಾದಿ ಪಕ್ಷದ ನಾಯಕ ಅಬು ಅಜ್ಮಿ ಅವರು ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಧೂಳಿಪಟವಾದ ಸೋಲಿನ ನಂತರ ತಮ್ಮ ಪಕ್ಷವು ಮೈತ್ರಿಯಿಂದ ಹೊರಬರಲು ನಿರ್ಧರಿಸಿದೆ ಎಂದು ಶನಿವಾರ ಘೋಷಿಸಿದ್ದಾರೆ.
ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಕೆಡವಿದವರಿಗೆ ಶಿವಸೇನೆ-ಯುಬಿಟಿ ಬೆಂಬಲ ವ್ಯಕ್ತಪಡಿಸಿದ ಬಗ್ಗೆ ಸಮಾಜವಾದಿ ಪಕ್ಷವು ಅಸಮಾಧಾನಗೊಂಡಿದೆ ಎಂದು ತಮ್ಮ ಮುಖವಾಣಿ ‘ಸಾಮ್ನಾ’ದಲ್ಲಿ ವರದಿ ಮಾಡಿದೆ.
ಅಬು ಅಜ್ಮಿ ಮಾತನಾಡಿ, “ಅವರು(ಶಿವಸೇನೆ – ಯುಬಿಟಿ) ಕಾಂಗ್ರೆಸ್, ಎನ್‌ಸಿಪಿ-ಎಸ್‌ಪಿ ಮತ್ತು ಎಸ್‌ಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರಿಂದ ಈಗ ಜಾತ್ಯತೀತರಾಗಿದ್ದಾರೆ ಎಂದು ಹೇಳುತ್ತಿದ್ದರು. ಸೋತ ನಂತರ ಅವರು ತಮ್ಮ ಹಳೆ ಕೆಲಸವನ್ನು ಮಾಡಲು ಪ್ರಾರಂಭಿಸಿದ್ದಾರೆ. ಇಂತಹ ಘಟನೆಗಳು ನಡೆದರೆ ಮಹಾ ವಿಕಾಸ್ ಅಘಾಡಿ ಮುಂದುವರಿಯುವುದಿಲ್ಲ” ಎಂದು ಹೇಳಿದ್ದಾರೆ.