ಹೊಸ ವರ್ಷಾರಂಭವಾಗ್ತಿದ್ದಂತೆ ಅನೇಕ ಬದಲಾವಣೆಗಳನ್ನು ನಾವು ಕಾಣಬಹುದು. ಅದ್ರಲ್ಲಿ ಆರ್ಥಿಕ ಬದಲಾವಣೆ ಕೂಡ ಸೇರಿದೆ. ಮುಂದಿನ ತಿಂಗಳು ಅಂದ್ರೆ ಹೊಸ ವರ್ಷದ ಮೊದಲ ತಿಂಗಳು ಜನವರಿಯಿಂದ ಎಟಿಎಂನಿಂದ ಹಣ ವಿತ್ ಡ್ರಾ ಮಾಡುವ ನಿಯಮದಲ್ಲಿ ಬದಲಾವಣೆಯಾಗಲಿದೆ. ಮಿತಿಗಿಂತ ಹೆಚ್ಚು ವಹಿವಾಟು ನಡೆಸಿದರೆ ಮೊದಲಿಗಿಂತ ಹೆಚ್ಚು ಶುಲ್ಕ ಪಾವತಿ ಮಾಡಬೇಕಾಗುತ್ತದೆ.
ಈ ವರ್ಷ ಜೂನ್‌ನಲ್ಲಿಯೇ, ಭಾರತೀಯ ರಿಸರ್ವ್ ಬ್ಯಾಂಕ್, ಜನವರಿ 1, 2022 ರಿಂದ ಮಾಸಿಕ ಮಿತಿಯನ್ನು ಮೀರಿದ ನಗದು ಮತ್ತು ನಗದುರಹಿತ ಎಟಿಎಂ ವಹಿವಾಟುಗಳಿಗೆ ಶುಲ್ಕವನ್ನು ಹೆಚ್ಚಿಸಲು ಬ್ಯಾಂಕುಗಳಿಗೆ ಅನುಮತಿ ನೀಡಿತ್ತು. ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ, ಆಕ್ಸಿಸ್ ಬ್ಯಾಂಕ್ ಅಥವಾ ಇತರ ಬ್ಯಾಂಕ್, ಎಟಿಎಂಗಳಲ್ಲಿ ಉಚಿತ ಮಿತಿಗಿಂತ ಹೆಚ್ಚಿನ ಹಣಕಾಸು ವಹಿವಾಟು ಶುಲ್ಕಗಳು ಜನವರಿ ಒಂದರಿಂದ 21 ರೂಪಾಯಿ ಜೊತೆ ಜಿಎಸ್ಟಿ ಆಗಲಿದೆ ಎಂದು ಆಕ್ಸಿಸ್ ಬ್ಯಾಂಕ್ ಹೇಳಿದೆ.
ಮುಂದಿನ ತಿಂಗಳಿನಿಂದ ಅಂದರೆ ಜನವರಿ 2022 ರಿಂದ, ಗ್ರಾಹಕರು ಮಾಸಿಕ ಉಚಿತ ವಹಿವಾಟುಗಳ ಮಿತಿಯನ್ನು ಮೀರಿದರೆ 21 ರೂಪಾಯಿ ಪಾವತಿ ಮಾಡಬೇಕು. ಇದು ಸದ್ಯ 20 ರೂಪಾಯಿಯಿದೆ. ಗ್ರಾಹಕರು ತಮ್ಮ ಸ್ವಂತ ಬ್ಯಾಂಕ್ ಎಟಿಎಂಗಳಿಂದ ಪ್ರತಿ ತಿಂಗಳು ಐದು ಉಚಿತ ವಹಿವಾಟು ನಡೆಸಬಹುದು. ಮೆಟ್ರೋ ನಗರಗಳಲ್ಲಿ ಇತರ ಬ್ಯಾಂಕ್‌ಗಳ ಎಟಿಎಂಗಳಿಂದ ಮೂರು ಮತ್ತು ಮೆಟ್ರೋ ಅಲ್ಲದ ಪ್ರದೇಶಗಳಲ್ಲಿ ಐದು ಉಚಿತ ವಹಿವಾಟು ನಡೆಸಬಹುದು.