ಪ್ರಧಾನಿ ನರೇಂದ್ರ ಮೋದಿಯವರು ಜರ್ಮನಿಯಲ್ಲಿ ನಡೆಯುತ್ತಿರುವ G-7 ರಾಷ್ಟ್ರಗಳ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋಬೈಡೆನ್, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಸೇರಿದಂತೆ ಹಲವರು ಭಾಗವಹಿಸಿದ್ದಾರೆ.
ಸೋಮವಾರದಂದು ನಡೆದ ಘಟನೆಯೊಂದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ಶೇರ್ ಮಾಡುತ್ತಿರುವ ನೆಟ್ಟಿಗರು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಎಷ್ಟು ಪ್ರಭಾವಶಾಲಿ ಎಂಬುದರ ಪ್ರತಿಬಿಂಬ ಇದು ಎಂದು ಬಣ್ಣಿಸುತ್ತಿದ್ದಾರೆ.
ಅಷ್ಟಕ್ಕೂ ನಡೆದಿದ್ದೇನೆಂದರೆ ಪ್ರಧಾನಿ ನರೇಂದ್ರ ಮೋದಿಯವರು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಜೊತೆ ಮಾತುಕತೆಯಲ್ಲಿ ಮಗ್ನರಾಗಿದ್ದ ವೇಳೆ ಅವರನ್ನು ಹುಡುಕಿಕೊಂಡು ಬಂದ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್, ಮೋದಿಯವರ ಬೆನ್ನು ತಟ್ಟಿದ್ದಾರೆ. ಮೋದಿಯವರು ಹಿಂದೆ ತಿರುಗಿ ನೋಡಿದಾಗ ಅವರ ಕೈಕುಲುಕಿ ಉಭಯ ಕುಶಲೋಪರಿ ವಿಚಾರಿಸಿದ್ದಾರೆ.
ಈ ವಿಡಿಯೋವನ್ನು ಶೇರ್ ಮಾಡುತ್ತಿರುವ ನೆಟ್ಟಿಗರು, ಅಮೆರಿಕಾ ಅಧ್ಯಕ್ಷರೇ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಹುಡುಕಿಕೊಂಡು ಬಂದು ಮಾತನಾಡಿಸುತ್ತಾರೆ ಎಂದರೆ ಮೋದಿಯವರೆಷ್ಟು ಪ್ರಭಾವಶಾಲಿಯೆಂಬುದು ಇದರಿಂದಲೇ ಸಾಬೀತಾಗುತ್ತದೆ ಎಂದು ಕೊಂಡಾಡಿದ್ದಾರೆ.