ವಾಷಿಂಗ್ಟನ್: ಕೊರೋನಾ ವೈರಸ್ ಮೂಲದ ಬಗ್ಗೆ ತನಿಖೆ ನಡೆಸಲು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಗುಪ್ತಚರ ಸಂಸ್ಥೆಗಳಿಗೆ ಆದೇಶಿಸಿದ್ದಾರೆ.
ಸೋಂಕು ಪ್ರಾಣಿಗಳಿಂದ ಹರಡಿತು ಎಂದು ಚಾಲ್ತಿಯಲ್ಲಿರುವ ಮಾಹಿತಿಯ ಜೊತೆಗೆ ಈ ವೈರಸ್ ಚೀನಾದ ವುಹಾನ್ ಲ್ಯಾಬ್ ನಿಂದ ಆಕಸ್ಮಿಕವಾಗಿ ಸೋರಿಕೆಯಾಗಿರುವ ಸಾಧ್ಯತೆ ಬಗ್ಗೆಯೂ ಚರ್ಚೆಯಾಗುತ್ತಿದೆ. ಬೈಡೆನ್ ಆಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ವೈರಸ್ ಮೂಲದ ಬಗ್ಗೆ ಪತ್ತೆ ಹಚ್ಚಿ 90 ದಿನದೊಳಗೆ ವರದಿ ನೀಡುವಂತೆ ಗುಪ್ತಚರ ವಿಭಾಗದ ಆರೋಗ್ಯ ಅಧಿಕಾರಿಗಳು ಮತ್ತು ವಿಜ್ಞಾನಿಗಳಿಗೆ ನಿರ್ದೇಶನ ನೀಡಲಾಗಿದೆ.
ಸುಮಾರು 6 ಲಕ್ಷಕ್ಕೂ ಅಧಿಕ ಅಮೆರಿಕನ್ನರನ್ನು ಕೊಂದ ವೈರಸ್ ಚೀನಾದಲ್ಲಿ ಹೇಗೆ ಹುಟ್ಟಿಕೊಂಡಿತು ಎಂಬುದರ ಬಗ್ಗೆ ಖಚಿತತೆ ಇಲ್ಲ. ಆದರೆ, ಇದರ ಬಗ್ಗೆ ತನಗೆ ವರದಿ ನೀಡಬೇಕು ಎಂದು ಬೈಡೆನ್ ನಿರ್ದೇಶಿಸಿದ್ದಾರೆ.
ಚೀನಾ ಮೂಲದ ವೈರಸ್ ಜಗತ್ತಿಗೆ ಹರಡಿದ ಬಗ್ಗೆಯೂ ಅಮೆರಿಕ ಗುಪ್ತಚರ ವಿಭಾಗ ತನಿಖೆ ಕೈಗೊಳ್ಳಲಿದೆ. 17 ತಿಂಗಳ ಅವಧಿಯಲ್ಲಿ ಜಗತ್ತಿನ ಪ್ರತಿಯೊಂದು ಭಾಗಕ್ಕೂ ಹರಡುವ ವೈರಸ್ ನ ಉಗಮದ ಬಗ್ಗೆ ಅನಿಶ್ಚಿತತೆ ಉಳಿದಿದ್ದು, ಇದರ ಬಗ್ಗೆ ಆಳವಾದ ವರದಿ ನೀಡುವಂತೆ ತಿಳಿಸಲಾಗಿದೆ.