ಬೆಂಗಳೂರು: ರಾಜ್ಯದಲ್ಲಿ ಪ್ರತಿದಿನ ಹಗಲು ದರೋಡೆ, ಮಕ್ಕಳ ಮೇಲೆ ಅತ್ಯಾಚಾರದಂತ ಅಪರಾಧ ಕೃತ್ಯಗಳು ರಾಜಾರೋಷವಾಗಿ ನಡೆಯುತ್ತಿದ್ದು, ಅಪರಾಧ ಮಾಡುವವರಿಗೆ ಯಾರದೇ ಭಯವಿಲ್ಲದಂತಾಗಿದೆ. ಇದರಿಂದ ಕರ್ನಾಟಕ ಜಂಗಲ್ ರಾಜ್ಯ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಬೀದರನಲ್ಲಿ ಹಾಡ ಹಗಲೇ ಎಟಿಎಂಗೆ ಹಣ ತುಂಬಲು ಬಂದವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿರುವುದು ರಾಜ್ಯವೇ ಬೆಚ್ಚಿ ಬೀಳುವಂತೆ ಮಾಡಿದೆ. ಆಡಳಿತ ನಡೆಸುವವರು ಕುರ್ಚಿಗಾಗಿ ಕಿತ್ತಾಟ ನಡೆಸುವುದರಲ್ಲಿ ನಿರತರಾಗಿದ್ದು, ಸರ್ಕಾರಕ್ಕೆ ಪೊಲೀಸರ ಮೇಲೆ ನಿಯಂತ್ರಣ ಇಲ್ಲದಂತಾಗಿದೆ. ಪೊಲಿಸರಿಗೆ ಕ್ರಿಮಿನಲ್ ಗಳ ಮೇಲೆ ನಿಯಂತ್ರಣ ಇಲ್ಲದಂತಾಗಿದ್ದು, ಕರ್ನಾಟಕ ಜಂಗಲ್ ರಾಜ್ಯ ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಸರ್ಕಾರದ ಅವಧಿಯಲ್ಲಿ ಮೂಕ ಪ್ರಾಣಿಗಳು, ಮನುಷ್ಯರು ಯಾರಿಗೂ ರಕ್ಷಣೆ ಇಲ್ಲ. ರಾಜ್ಯ ಸರ್ಕಾರ ತಪ್ಪಿತಸ್ಥರ ಮೇಲೆ ಕೂಡಲೇ ಕ್ರಮ ಕೈಗೊಂಡು ಕಠಿಣ ಶಿಕ್ಷೆ ನೀಡಬೇಕು. ಇಲ್ಲದಿದ್ದರೆ ರಾಜ್ಯದ ಜನರು ದಂಗೆ ಏಳುತ್ತಾರೆ ಎಂದು ಎಚ್ಚರಿಸಿದ್ದಾರೆ.