ಕೋಲಾರ: ಕೋಲಾರದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕರ್ಮಕಾಂಡದ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಭೈರತಿ ಸುರೇಶ್, ದುಡ್ಡು ಉಳಿಸಲು ಹೋಗಿ ಈ ರೀತಿ ಕೃತ್ಯವೆಸಗಿದ್ದಾರೆ ಎಂದು ತಿಳಿಸಿದ್ದಾರೆ.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಭೈರತಿ ಸುರೇಶ್, ವಸತಿ ಶಾಲೆಯಲ್ಲಿ ಮಕ್ಕಳನ್ನು ಶೌಚ ಗುಂಡಿಗೆ ಇಳಿಸಿ ಸ್ವಚ್ಛತೆ ಮಾಡಿಸಿರುವ ಘಟನೆ ಇದೊಂದು ಹೇಯ ಕೃತ್ಯ. ದುಡ್ಡು ಉಳಿಸಲು ಈ ರೀತಿ ಕೃತ್ಯವೆಸಗಿದ್ದಾರೆ ಎಂದು ಕಿಡಿಕಾರಿದರು.
ಈಗಾಗಲೇ ಇಬ್ಬರು ಶಿಕ್ಷಕರನ್ನು ಬಂಧಿಸಲಾಗಿದೆ. ಮೂವರು ತಲೆಮರೆಸಿಕೊಂಡಿದ್ದಾರೆ. ತಪ್ಪಿತಸ್ಥರಿಗೆ ರಾಜ್ಯಕ್ಕೆ ಮಾದರಿಯಾಗುವ ಕಠಿಣ ಶಿಕ್ಷೆಯನ್ನು ಕೊಡಲಿದ್ದೇವೆ. ಪ್ರಾಂಶುಪಾಲರು, ಶಿಕ್ಷಕರು, ಡಿ ಗ್ರೂಪ್ ನೌಕರರು ಎಲ್ಲರನ್ನೂ ವರ್ಗಾವಣೆ ಮಾಡಲಾಗುವುದು ಎಂದರು.
ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುವುದು. ತನಿಖೆಯಲ್ಲಿ ಲೋಪ ಕಂಡುಬಂದರೆ ಅವರನ್ನೂ ಅಮಾನತು ಮಾಡಲಾಗುವುದು ಎಂದು ಹೇಳಿದರು.