ಸತತವಾಗಿ 15 ಮಹಿಳೆಯರನ್ನು ಮದುವೆಯಾಗಿ ಬ್ಲಾಕ್‌ಮೇಲ್ ಮೂಲಕ ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿಯನ್ನು ಭುವನೇಶ್ವರ ಪೊಲೀಸರು ಬಂಧಿಸಿದ್ದಾರೆ. ಇದೇ ರೀತಿಯ ಅಪರಾಧವೆಸಗಿದ್ದ ನಕಲಿ ವೈದ್ಯನನ್ನು ಒಡಿಶಾದಲ್ಲಿ ಇತ್ತೀಚೆಗೆ ಬಂಧಿಸಿದ ಬೆನ್ನಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಯು ಪ್ರಾಥಮಿಕವಾಗಿ ಎರಡನೇ ಮದುವೆಯಾಗಲು ಬಯಸುವ ಮಧ್ಯವಯಸ್ಕ ಮಹಿಳೆಯರನ್ನೇ ಗುರಿಯಾಗಿಸಿಕೊಂಡಿದ್ದ. ಅವನ ಯೋಜನೆಯಂತೆ ಇಂತಹ ಮಹಿಳೆಯರನ್ನು ಮದುವೆಯಾಗುವುದು, ಅವರ ಒಪ್ಪಿಗೆಯಿಲ್ಲದೆ ಖಾಸಗಿ ಕ್ಷಣಗಳನ್ನು ಚಿತ್ರೀಕರಿಸುವುದು ಮತ್ತು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಲು ವೀಡಿಯೊಗಳನ್ನು ಬಳಸಿಕೊಳ್ಳುವುದಾಗಿತ್ತು. ಇಂತಹ ವಂಚನೆಗೆ ಒಳಗಾದ ಓರ್ವ ಸಂತ್ರಸ್ತೆ ಸಂಕಷ್ಟಕ್ಕೆ ಸಿಲುಕಿ ನ್ಯಾಯ ಕೋರಿ ಪೊಲೀಸರನ್ನು ಸಂಪರ್ಕಿಸಿದಾಗ ಆತನ ಮೋಸದ ಚಟುವಟಿಕೆಗಳು ಬೆಳಕಿಗೆ ಬಂದಿವೆ.
ಸಂತ್ರಸ್ತೆಯು ಹೇಳಿರುವಂತೆ ಆಕೆಯು ವಿಚ್ಛೇದಿತಳಾಗಿದ್ದು ಎರಡನೇ ಮದುವೆಗೆ ವರನನ್ನು ಹುಡುಕುತ್ತಿದ್ದಾಗ ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಆರೋಪಿಯನ್ನು ನೋಡಿದ್ದಾರೆ. ಆತ ತನ್ನನ್ನು ಉನ್ನತ ದರ್ಜೆಯ ಅಧಿಕಾರಿಯೆಂದು ಬಿಂಬಿಸಿಕೊಂಡು ಮದುವೆಯಾಗಿದ್ದಾನೆ.
ಆದರೆ ಮದುವೆಯಾದ ಕೆಲವು ದಿನಗಳ ನಂತರ ಆರೋಪಿ ಆಕೆಯನ್ನು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ನಿಂದಿಸಲು ಪ್ರಾರಂಭಿಸಿದ. ತಮ್ಮ ಖಾಸಗಿ ಕ್ಷಣದ ವಿಡಿಯೋಗಳನ್ನು ಸೆರೆಹಿಡಿದಿಟ್ಟುಕೊಂಡಿದ್ದ. ಆಕೆ ತನ್ನ ಹೆತ್ತವರ ಮನೆಗೆ ಹೋಗಲು ನಿರ್ಧರಿಸಿದಾಗ, ಆರೋಪಿಯು ವಿಡಿಯೋ ಬಳಸಿಕೊಂಡು ಹಣ ನೀಡದಿದ್ದರೆ ಅದನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದನು. ಆರಂಭದಲ್ಲಿ ಹಣ ನೀಡಿದರೂ ಪದೇ ಪದೇ ದುಡ್ಡಿಗಾಗಿ ಒತ್ತಾಯ ಮಾಡಿದಾಗ ಮಹಿಳೆ ಪೊಲೀಸರ ಮೊರೆ ಹೋದಳು.
ಸಂತ್ರಸ್ತೆಯ ದೂರಿನ ನಂತರ, ಅಪರಾಧ ವಿಭಾಗವು ಸಮಗ್ರ ತನಿಖೆ ಪ್ರಾರಂಭಿಸಿತು. ಆರೋಪಿಯು 15 ಮಹಿಳೆಯರೊಂದಿಗೆ ಇದೇ ರೀತಿಯ ವಂಚನೆ ಎಸಗಿರುವುದು ತನಿಖೆಯಿಂದ ತಿಳಿದುಬಂದಿದೆ. ಆರೋಪಿಯನ್ನು ಬಂಧಿಸಲಾಗಿದ್ದು ಪ್ರಸ್ತುತ ವಿಚಾರಣೆ ನಡೆಸಲಾಗುತ್ತಿದೆ.