ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಎರಡು ದಿನಗಳ ಹೆಣ್ಣು ಮಗುವೊಂದು ರೈಲ್ವೆ ಹಳಿ ಮೇಲೆ ಪತ್ತೆಯಾಗಿದ್ದು, ಇದನ್ನು ರಕ್ಷಿಸಿದ ನಂತರ, ಸಿಸಿ ಟಿವಿ ದೃಶ್ಯಾವಳಿ ಪರಿಶೀಲಿಸಿದ ವೇಳೆ ಆತಂಕಕಾರಿ ವಿವರ ಬಹಿರಂಗವಾಗಿದೆ.
ಸಿಸಿ ಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಮಗುವನ್ನು ರೈಲು ಹಳಿ ಮೇಲೆ ಎಸೆದ ಆರೋಪದ ಮೇಲೆ ಆರೋಪಿ ನರ್ಸ್ ಆಸ್ಮಾನ್ ಖಾನ್ ಳನ್ನು ಪೊಲೀಸರು ಬಂಧಿಸಿದ್ದಾರೆ. 17 ವರ್ಷದ ಅಪ್ರಾಪ್ತ ಬಾಲಕಿಗೆ ಮಗು ಜನಿಸಿರುವುದು ತನಿಖೆಯಿಂದ ತಿಳಿದುಬಂದಿದೆ. ಆಕೆಯ ಕುಟುಂಬದ ಸದಸ್ಯರೂ ಸೇರಿದಂತೆ ಎಲ್ಲರ ವಿರುದ್ದ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 93 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸಿಸಿ ಟಿವಿ ಕ್ಲಿಪ್‌ನಲ್ಲಿ ನರ್ಸ್ ಎಂದು ಹೇಳಲಾದ ಮಧ್ಯವಯಸ್ಕ ಮಹಿಳೆ, ಹಳದಿ ಮತ್ತು ನೀಲಿ ಬಣ್ಣದ ಪ್ಯಾಕೆಟ್ ಅನ್ನು ಹೊತ್ತೊಯ್ಯುತ್ತಿರುವುದು ಕಂಡು ಬಂದಿದ್ದು,ಇದರಲ್ಲಿ ನವಜಾತ ಶಿಶುವನ್ನು ಸುತ್ತಿಡಲಾಗಿತ್ತು ಎನ್ನಲಾಗಿದೆ. ಆಕೆ ತನ್ನ ಸ್ಕೂಟರ್‌ನಿಂದ ರೈಲ್ವೇ ಟ್ರ್ಯಾಕ್‌ನ ಬಳಿ ಬ್ಯಾಗ್ ತೆಗೆದುಕೊಂಡು ಹೋಗಿದ್ದು, ಯಾರೂ ತನ್ನತ್ತ ನೋಡುತ್ತಿಲ್ಲ ಎಂಬುದನ್ನು ಗಮನಿಸಿ ಪ್ಯಾಕೆಟ್ ಅನ್ನು ರೈಲು ಹಳಿ ಮೇಲೆ ಹಾಕಿ ಬರಿಗೈಯಲ್ಲಿ ವಾಪಾಸ್ ಆಗಿದ್ದಾಳೆ.
ರೈಲು ಹಳಿಯಿಂದ ರಕ್ಷಿಸಲಾದ ಶಿಶು ಬುಧವಾರ ಕಮಲಾ ನೆಹರೂ ಆಸ್ಪತ್ರೆಯಲ್ಲಿ 24 ಗಂಟೆಗಳ ಕಾಲ ಹೋರಾಟದ ನಂತರ ಸಾವನ್ನಪ್ಪಿದೆ ಎಂದು ವರದಿಯಾಗಿದೆ.
ಅವಿವಾಹಿತ ಬಾಲಕಿ ಗರ್ಭಿಣಿಯಾಗಿದ್ದ ಕಾರಣ ಆಕೆಯ ಕುಟುಂಬಸ್ಥರು ನರ್ಸ್ ಸಹಾಯದಿಂದ ಹೆರಿಗೆ ಮಾಡಿಸಿರಬಹುದು ಹಾಗೂ ಬಳಿಕ ಕೃತ್ಯ ಮರೆಮಾಚಲು ಶಿಶುವನ್ನು ರೈಲು ಹಳಿ ಮೇಲೆ ಎಸೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಬುಧವಾರ ಭೋಪಾಲ್‌ನ ಬಾಗ್ ಉಮ್ರಾವ್ ದುಲ್ಹಾದಲ್ಲಿ ಹಳಿಗಳ ಬಳಿ ಮಗುವಿನ ಅಳು ಕೇಳಿದ ಸ್ಥಳೀಯರಿಗೆ ನವಜಾತ ಶಿಶು ಪತ್ತೆಯಾಗಿತ್ತು. ಶಬ್ದವನ್ನು ಅನುಸರಿಸಿ ಹೋದಾಗ ಗೋಣಿ ಚೀಲದಲ್ಲಿ ಸುತ್ತಿಡಲಾಗಿದ್ದ ಮಗು ಕಂಡು ಬಂದಿದ್ದು, ಹೊಕ್ಕುಳಬಳ್ಳಿಯನ್ನೂ ಸಹ ಕತ್ತರಿಸಿರಲಿಲ್ಲ. ತಕ್ಷಣ ಮಗುವನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.