ಮಧ್ಯಪ್ರದೇಶದ ಭೋಪಾಲ್ನಲ್ಲಿ 52 ವರ್ಷದ ವ್ಯಕ್ತಿಯೊಬ್ಬರು ತಮ್ಮ ಪತ್ನಿ ವರದಕ್ಷಿಣೆ ಕಿರುಕುಳದ ಪ್ರಕರಣ ದಾಖಲಿಸಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ವಿವಾಹವಾಗಿ 30 ವರ್ಷಗಳಾಗಿತ್ತು.
ರಾಜೀವ್ ಗಿರಿ ಎಂಬುವವರ ಪತ್ನಿ ಜಾನಕಿ ಜನವರಿ 26 ರಂದು ಅವರ ವಿರುದ್ಧ ದೂರು ದಾಖಲಿಸಿದ್ದರು. ಅಂದಿನಿಂದ ಅವರು ತೀವ್ರವಾಗಿ ಖಿನ್ನತೆಗೆ ಒಳಗಾಗಿದ್ದರು ಎಂದು ವರದಿಯಾಗಿದೆ.
ಐದು ದಿನಗಳ ಕಾಲ ಆತಂಕ ಮತ್ತು ಖಿನ್ನತೆಗೊಳಗಾಗಿದ್ದ ಅವರು ಫೆಬ್ರವರಿ 1 ರಂದು ವಿಷ ಸೇವಿಸಿ ಸಾವನ್ನಪ್ಪಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದು, ಮಗಳಿಗೆ ಮದುವೆಯಾಗಿದ್ದರೆ 25 ವರ್ಷದ ಮಗ ಉದ್ಯೋಗದಲ್ಲಿದ್ದಾನೆ.
ರಾಜೀವ್ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಗ, ಅವರ ಪತ್ನಿ ಪೊಲೀಸರನ್ನು ಸಂಪರ್ಕಿಸಿ ಮತ್ತೊಂದು ದೂರು ದಾಖಲಿಸಿದ್ದಾರೆ. ವರದಕ್ಷಿಣೆ ಕಿರುಕುಳ ಪ್ರಕರಣವನ್ನು ಹಿಂಪಡೆಯುವಂತೆ ಒತ್ತಡ ಹೇರಲು ಅವರು ವಿಷ ಸೇವಿಸಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ರತನ್ ಸಿಂಗ್ ಪರಿಹಾರ್ ತಿಳಿಸಿದ್ದಾರೆ.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪರಿಹಾರ್ ತಕ್ಷಣ ಕಾನ್ಸ್ಟೆಬಲ್ ಒಬ್ಬರನ್ನು ಆಸ್ಪತ್ರೆಗೆ ಕಳುಹಿಸಿ ರಾಜೀವ್ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಸೂಚಿಸಿದ್ದರು. ಆದರೆ, ವೈದ್ಯರು ರಾಜೀವ್ ಸ್ಥಿತಿ ಗಂಭೀರವಾಗಿದೆ ಎಂದು ಘೋಷಿಸಿದ್ದು ಹೀಗಾಗಿ ಅವರು ಯಾವುದೇ ಹೇಳಿಕೆ ನೀಡಲು ಸಾಧ್ಯವಾಗಲಿಲ್ಲ. ಅರ್ಧ ಗಂಟೆಯೊಳಗೆ ಅವರು ನಿಧನರಾದರು. ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.