ಬಿಹಾರದ ಸರನ್ ಎಂಬ ಊರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುತ್ತಿದ್ದ ಭೋಜ್ಪುರಿ ಜಾನಪದ ಗಾಯಕಿ ನಿಶಾ ಉಪಾಧ್ಯಾಯಗೆ ಗುಂಡೇಟಿನ ಗಾಯಗಳಾಗಿವೆ.
ಜನಿವಾರ ಧಾರಣೆ ಮಾಡುವ ಸಂಬಂಧ ಆಯೋಜಿಸಲಾಗಿದ್ದ ಯಜ್ಞೋಪವಿತ್ ಸಮಾರಂಭದ ವೇಲೆ ಈ ಘಟನೆ ಸಂಭವಿಸಿದೆ. ಸಮಾರಂಭದ ವೇಳೆ ಸಂಭ್ರಮಾಚರಣೆ ಪ್ರಯುಕ್ತವಾಗಿ ಹಾರಿಸಿದ ಗುಂಡೊಂದು ನಿಶಾರ ಎಡ ತೊಡೆಗೆ ಬಿದ್ದಿದೆ.
ಕೂಡಲೇ ನಿಶಾರನ್ನು ಪಟನಾದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಯಾವುದೇ ಲಿಖಿತ ದೂರು ದಾಖಲಾಗಿಲ್ಲವೆಂದು ತಿಳಿಸಿದ ಪೊಲೀಸರು, ಫೈರಿಂಗ್ ನಡೆದಿದ್ದು ಹೇಗೆಂದು ತನಿಖೆ ಮಾಡುತ್ತಿರುವುದಾಗಿ ಹೇಳಿದ್ದಾರೆ.
ಈ ರೀತಿಯ ಉಪಟಳಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ, ಲೈಸೆನ್ಸ್ ಇದ್ದರೂ ಸಹ ಸಂಭ್ರಮಾಚರಣೆಯಲ್ಲಿ ಗುಂಡು ಹಾರಿಸುವುದನ್ನು ನಿಷೇಧಿಸಲು ಬಿಹಾರ ಸರ್ಕಾರ ಚಿಂತನೆ ನಡೆಸಿದೆ.
ಸಾರ್ವಜನಿಕ ಸ್ಥಳಗಳು, ಧಾರ್ಮಿಕ ಕ್ಷೇತ್ರಗಳು, ಮದುವೆ ಅಥವಾ ಇತರೆ ಕಾರ್ಯಕ್ರಮಗಳಲ್ಲಿ ಸಂಭ್ರಮಾಚರಣೆಗೆಂದು ಲೈಸೆನ್ಸ್ ಇದ್ದರೂ ಸಹ ಗುಂಡು ಹಾರಿಸುವಂತಿಲ್ಲ ಎಂದು ಶಸ್ತ್ರಾಸ್ತ್ರ ಕಾಯಿದೆ 2019ಕ್ಕೆ ಕೇಂದ್ರ ಸರ್ಕಾರ ಅದಾಗಲೇ ತಿದ್ದುಪಡಿ ತಂದಿದ್ದು, ಹೀಗೆ ಮಾಡಿದಲ್ಲಿ ಅದನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಿ ಎರಡು ವರ್ಷಗಳ ಮಟ್ಟಿಗೆ ಜೈಲು ಶಿಕ್ಷೆ ನೀಡುವ ಸಾಧ್ಯತೆ ಇದೆ.