
ಬೆಂಗಳೂರು: ಕೊಪ್ಪಳ ಜಿಲ್ಲೆಯ ತೊಗಲುಗೊಂಬೆಯಾಟ ಕಲಾವಿದೆ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಅವರು 2025ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅಭಿನಂದಿಸಿದ್ದಾರೆ.
ಇದು ಇಡೀ ನಾಡು ಹೆಮ್ಮೆಪಡುವಂತದ್ದು. ಸರಿಸುಮಾರು 7 ದಶಕಗಳ ಕಾಲ ತೊಗಲುಗೊಂಬೆಯಾಟವನ್ನೇ ಬದುಕಿನ ಹಾದಿಯಾಗಿಸಿಕೊಂಡು, ನೆಲದ ಕಲೆಯನ್ನು ದೇಶ – ವಿದೇಶಗಳಿಗೂ ಪರಿಚಯಿಸಿದ ಹಿರಿಯ ಜೀವ ಭೀಮವ್ವನವರು ಈ ಗೌರವಕ್ಕೆ ಅತ್ಯಂತ ಅರ್ಹರು ಎನ್ನುವುದು ನನ್ನ ಭಾವನೆ ಎಂದು ಸಿಎಂ ತಿಳಿಸಿದ್ದಾರೆ.
ಪ್ರಶಸ್ತಿ ವಿಜೇತ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಅವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ಗ್ರಾಮೀಣ ಕಲೆ, ಜಾನಪದ ಸಂಸ್ಕೃತಿಗಳು ಇತಿಹಾಸದ ಪುಟ ಸೇರುತ್ತಿರುವ ಇಂದಿನ ಆಧುನಿಕ ಕಾಲಘಟ್ಟದಲ್ಲಿ ಕಲಾಸೇವೆಗೆ ಬದುಕು ಸಮರ್ಪಿಸಿ, ಅದನ್ನು ಜನಮಾನಸದಲ್ಲಿ ಉಳಿಯುವಂತೆ ಮಾಡುತ್ತಿರುವ ಭೀಮವ್ವನವರ ಸೇವೆ – ಸಾಧನೆ ತಲೆಮಾರುಗಳಿಗೆ ಪ್ರೇರಣೆಯಾಗಿದೆ ಎಂದು ಹೇಳಿದ್ದಾರೆ.