ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲೇ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರ ಶೇಖರ ಆಜಾದ್ ಸಮಾಜವಾದಿ ಪಕ್ಷದೊಂದಿಗೆ ತಾವು ಮೈತ್ರಿ ಮಾಡಿಕೊಂಡಿರುವ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ. ಸಮಾಜವಾದಿ ಪಕ್ಷದೊಂದಿಗೆ ಸೇರಿ ಈ ಬಾರಿಯ ವಿಧಾನಸಭಾ ಚುನಾವಣೆಯನ್ನು ಎದುರಿಸಲಿದ್ದೇವೆ ಎಂದು ಚಂದ್ರಶೇಖರ್ ಆಜಾದ್ ಹೇಳಿದ್ದಾರೆ.
ಇಂದು ಮಧ್ಯಾಹ್ನ12:30ರ ಸುಮಾರಿಗೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹಾಗೂ ಚಂದ್ರಶೇಖರ್ ಆಜಾದ್ ಸುದ್ದಿಗೋಷ್ಠಿಯನ್ನು ನಡೆಸಲಿದ್ದಾರೆ.
ಈ ವಿಚಾರವಾಗಿ ಮಾಧ್ಯಮಗಳ ಜೊತೆಯಲ್ಲಿ ಮಾತನಾಡಿದ ಚಂದ್ರ ಶೇಖರ್ ಆಜಾದ್, ಸಮಾಜವಾದಿ ಹಾಗೂ ಭೀಮ್ ಆರ್ಮಿ ನಡುವಿನ ಮೈತ್ರಿ ಧೃಡಪಟ್ಟಿದೆ. ಹೀಗಾಗಿಯೇ ನಾವು ಸುದ್ದಿಗೋಷ್ಠಿಯನ್ನು ನಡೆಸಲಿದ್ದೇವೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸೀಟು ಹಂಚಿಕೆಯ ಒಪ್ಪಂದಗಳ ಬಗ್ಗೆಯೂ ವಿವರಣೆ ನೀಡುವುದಾಗಿ ಆಜಾದ್ ಹೇಳಿದ್ದಾರೆ.
ಕೋವಿಡ್ 19 ಮಾರ್ಗಸೂಚಿ ಹಾಗೂ ಸೆಕ್ಷನ್ 144ರ ಅಡಿಯಲ್ಲಿ ಆಜಾದ್ ಅವರ ಲಕ್ನೋ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಈ ಸಂಬಂಧ ಪಕ್ಷಕ್ಕೆ ಈ ಹಿಂದೆಯೇ ನೋಟಿಸ್ ನೀಡಲಾಗಿತ್ತಾದರೂ ಅವರು ಅದನ್ನು ನಿರ್ಲಕ್ಷಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.