ಗುಜರಾತ್ ನಲ್ಲಿ ವರದಿಯಾಗಿರುವ ಆಘಾತಕಾರಿ ಘಟನೆಯೊಂದರಲ್ಲಿ ಲೈಂಗಿಕ ದೌರ್ಜನ್ಯದ ಆರೋಪಿಯೊಬ್ಬ ತನ್ನ ಗುದನಾಳದಲ್ಲಿ ಸಣ್ಣ ಮೊಬೈಲ್ ಫೋನ್ ಬಚ್ಚಿಟ್ಟುಕೊಂಡು ಸಿಕ್ಕಿಬಿದ್ದಿದ್ದಾನೆ. ಮೊಬೈಲ್ ಬಳಕೆ ಬಗ್ಗೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಸಂಪೂರ್ಣ ಶೋಧನೆಗಿಳಿದಾಗ ಆರೋಪಿಯ ಬ್ಯಾರಕ್ನಲ್ಲಿ ಚಾರ್ಜರ್ ಅಡಗಿರುವುದು ಕಂಡುಬಂದಿತು. ನಂತರ ಸೋನೋಗ್ರಫಿ ಮತ್ತು ಎಕ್ಸ್-ರೇ ಸ್ಕ್ಯಾನ್ ನಲ್ಲಿ ಆರೋಪಿಯಲ್ಲಿ ಫೋನ್ ಇದ್ದದ್ದು ದೃಢಪಟ್ಟಿತು.
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ ಮೊಬೈಲ್ ಸುಳಿವು ಪಡೆದ ನಂತರ ಜೈಲು ಅಧಿಕಾರಿಗಳು ವಿವರವಾದ ತನಿಖೆ ನಡೆಸಿದರು. ಆರೋಪಿ ರವಿ ಬರೀಯಾ ಬ್ಯಾರಕ್ನಲ್ಲಿ ಹುಡುಕಾಟ ನಡೆಸಿದಾಗ ಹೊಂಡದಲ್ಲಿ ಬಚ್ಚಿಟ್ಟಿದ್ದ ಮೊಬೈಲ್ ಫೋನ್ ಚಾರ್ಜರ್ ಪತ್ತೆಯಾಗಿದ್ದು ಮತ್ತಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿತು. ಆದರೆ ಅಲ್ಲಿ ಎಷ್ಟೇ ಹುಡುಕಾಡಿದರೂ ಫೋನ್ ಪತ್ತೆಯಾಗಲಿಲ್ಲ.
ಚಾರ್ಜರ್ನ ಪತ್ತೆ ಬಳಿಕ ಅಧಿಕಾರಿಗಳು ಆರೋಪಿಯ ಹೊಟ್ಟೆಯ ಸೋನೋಗ್ರಫಿ ಮತ್ತು ಎಕ್ಸ್-ರೇ ಸ್ಕ್ಯಾನ್ ಮಾಡಿದಾಗ ಮುಚ್ಚಿಟ್ಟಿದ್ದ ಮೊಬೈಲ್ ಫೋನ್ ಪತ್ತೆಯಾಯ್ತು.
ರವಿ ಬರಿಯಾ ಜೈಲಿನಲ್ಲಿ ಮೊಬೈಲ್ ಫೋನ್ ಕಳ್ಳಸಾಗಣೆ ಮಾಡಿದ್ದಾನೆಂದು ಜೈಲು ಅಧಿಕಾರಿಗಳು ಶಂಕಿಸಿದ ನಂತರ ಎಕ್ಸ್-ರೇ ನಡೆಸಲಾಯ್ತು. ಗುದನಾಳದೊಳಗೆ ಅಡಗಿಸಿಟ್ಟಿದ್ದ ಮೊಬೈಲ್ ಫೋನ್ ಅನ್ನು ಎಕ್ಸ್-ರೇ ಬಹಿರಂಗಪಡಿಸಿತು. ಜೈಲಿನಲ್ಲಿ ಎಲೆಕ್ಟ್ರಾನಿಕ್ ಸಾಧನಗಳನ್ನು ಕಳ್ಳಸಾಗಣೆಗಾಗಿ ಬರಿಯಾ ವಿರುದ್ಧ ಆರೋಪಗಳನ್ನು ದಾಖಲಿಸಲು ನಿಲಂಬಾಗ್ ಪೊಲೀಸರಿಗೆ ಅರ್ಜಿ ಸಲ್ಲಿಸಲಾಗುವುದು ಎಂದು ಜೈಲಧಿಕಾರಿಗಳು ಹೇಳಿದ್ದಾರೆ.