
ಮುಂಬರುವ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಜೆಡಿಎಸ್, ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ರಾಜ್ಯದಾದ್ಯಂತ ಪಂಚರತ್ನ ರಥ ಯಾತ್ರೆ ನಡೆಸುತ್ತಿದೆ. ಅಲ್ಲದೆ ಈಗಾಗಲೇ ಚುನಾವಣೆಗೆ ಸ್ಪರ್ಧಿಸುವವರ ಮೊದಲ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಶೀಘ್ರದಲ್ಲಿಯೇ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದ್ದು, ಆದರೆ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಕಗ್ಗಂಟಾಗಿ ಪರಿಣಮಿಸಿದೆ. ಈ ಕ್ಷೇತ್ರದಿಂದ ಕಣಕ್ಕಿಳಿಯಲು ಹೆಚ್.ಡಿ. ರೇವಣ್ಣನವರ ಪತ್ನಿ ಭವಾನಿ ರೇವಣ್ಣ ಹಾಗೂ ಮಾಜಿ ಶಾಸಕ ಪ್ರಕಾಶ್ ಅವರ ಪುತ್ರ ಸ್ವರೂಪ್ ಆಕಾಂಕ್ಷಿಗಳಾಗಿದ್ದಾರೆ.
ಈ ಇಬ್ಬರೂ ಆಕಾಂಕ್ಷಿಗಳು ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಪ್ರಚಾರ ಕಾರ್ಯ ನಡೆಸುತ್ತಿದ್ದು, ಇದರ ಮಧ್ಯೆ ಗುರುವಾರದಂದು ಮನೆ ದೇವರಾದ ಹರದನಹಳ್ಳಿ ದೇವೇಶ್ವರ ಹಾಗೂ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದ ಹೆಚ್.ಡಿ. ರೇವಣ್ಣ ಮತ್ತವರ ಕುಟುಂಬ, ಪೂಜೆ ಸಲ್ಲಿಸಿದ ಬಳಿಕ ಅಧಿಕೃತವಾಗಿಯೇ ಚುನಾವಣಾ ಪ್ರಚಾರ ಕಾರ್ಯ ಆರಂಭಿಸಿದೆ.
ಈ ಸಂದರ್ಭದಲ್ಲಿ ಎಚ್.ಡಿ. ರೇವಣ್ಣ, ಭವಾನಿ ರೇವಣ್ಣ ಹಾಗೂ ಅವರ ಪುತ್ರ ಪ್ರಜ್ವಲ್ ರೇವಣ್ಣ ಹಾಜರಿದ್ದು, ಬಳಿಕ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಸಂಸದ ಪ್ರಜ್ವಲ್ ರೇವಣ್ಣ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸುತ್ತಿರುವ ಪಕ್ಷ ಸಂಘಟನೆಯ ಸಭೆಯಲ್ಲಿ ಭವಾನಿ ರೇವಣ್ಣ ಸಕ್ರಿಯವಾಗಿ ಭಾಗವಹಿಸುತ್ತಿದ್ದು, ಅವರಿಗೇ ಟಿಕೆಟ್ ಖಚಿತ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಈ ಎಲ್ಲಾ ಬೆಳವಣಿಗೆಗಳು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.