ಹಾಸನ: ಅಶ್ಲಿಲ ವಿಡಿಯೋ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಒಂದೆಡೆ ಸಂಸದ ಪ್ರಜ್ವಲ್ ರೇವಣ್ಣ ಬಂಧನವಾಗಿದೆ. ಮತ್ತೊಂದೆಡೆ ಹೆಚ್.ಡಿ.ರೇವಣ್ಣ ಜಾಮೀನು ಅರ್ಜಿ ರದ್ದುಗೊಳಿಸುವಂತೆ ಎಸ್ಐಟಿ ಮತ್ತೆ ಕೋರ್ಟ್ ಮೊರೆ ಹೋಗಿದೆ. ಈ ನಡುವೆ ಹೆಚ್.ಡಿ.ರೇವಣ್ಣ ಪತ್ನಿ ಭವಾನಿ ರೇವಣ್ಣಗೂ ಸಂಕಷ್ಟ ಎದುರಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟಿಸ್ ನೀಡಿದೆ. ಆದರೆ ಕಳೆದ 15 ದಿನಗಳಿಂದ ಭವಾನಿ ರೇವಣ್ಣ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎನ್ನಲಾಗಿದೆ.
15 ದಿನಗಳ ಹಿಂದೆ ಎಸ್ಐಟಿ ಅಧಿಕಾರಿಗಳು ಹೊಳೆನರಸೀಪುರ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಆನಂತರ ಮೇ 6ರಂದು ಜೆಡಿಎಸ್ ಶಾಸಕರು, ಮಾಜಿ ಶಾಸಕರು ಹೊಳೆನರಸೀಪುರ ನಿವಾಸದಲ್ಲಿ ಭವಾನಿ ರೇವಣ್ಣ ಅವರನ್ನು ಭೇಟಿಯಾಗಿದ್ದರು. ರೇವಣ್ಣ ಬಿಡುಗಡೆಯಾಗಿ ಜೈಲಿನಿಂದ ಬಂದರೂ ಅವರ ಭೇಟಿಗೂ ಭವಾನಿ ರೇವಣ್ಣ ಬಂದಿಲ್ಲ. ಕಳೆದ 15 ದಿನಗಳಿಂದ ಭವಾನಿ ರೇವಣ್ಣ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಭವಾನಿ ರೇವಣ್ಣ ನಿಗೂಢ ಸ್ಥಳದಲ್ಲಿದ್ದಾರೆ ಎನ್ನಲಾಗುತ್ತಿದೆ.
ಸಧ್ಯ ಎಸ್ಐಟಿ ಭವಾನಿ ರೇವಣ್ಣಗೆ ನೋಟಿಸ್ ನೀಡಿದ್ದು, ಜೂ 1ರಂದು ಮನೆಯಲ್ಲಿಯೇ ಇರುವಂತೆ ಸೂಚಿಸಿದೆ. ಆದರೆ ಎಸ್ಐಟಿ ನೋಟಿಸ್ ಗೆ ಭವಾನಿ ರೇವಣ್ಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನೋಟಿಸ್ ಗೆ ಉತ್ತರ ನೀಡದೇ ಎಸ್ಕೇಪ್ ಆಗಿದ್ದಾರಾ ಎಂಬ ಅನುಮಾನವೂ ವ್ಯಕ್ತವಾಗಿದೆ.