ಬೆಂಗಳೂರು: ಅಪಹರಣ ಪ್ರಕರಣದಲ್ಲಿ ಬಂಧನ ಭೀತಿಯಿಂದ ಭವಾನಿ ರೇವಣ್ಣ ನಾಪತ್ತೆಯಾಗಿದ್ದಾರೆ. ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆಯಲಿದೆ.
ಇದಕ್ಕಾಗಿ ಭವಾನಿ ರೇವಣ್ಣ ಅವರು ಕಾಯುತ್ತಿದ್ದು, ನಿರೀಕ್ಷಣಾ ಜಾಮೀನು ಸಿಗದಿದ್ದರೆ ಎಸ್ಐಟಿ ಎದುರು ಶರಣಾಗಲು ಪ್ಲಾನ್ ಮಾಡಿಕೊಂಡಿದ್ದಾರೆ. ಈಗಾಗಲೇ ವಕೀಲರೊಂದಿಗೆ ಭವಾನಿ ರೇವಣ್ಣ ಮತ್ತು ಕುಟುಂಬದವರು ಚರ್ಚೆ ನಡೆಸಿದ್ದಾರೆ. ಅನಾರೋಗ್ಯದ ಕಾರಣ ನೀಡಿ ಕಾಲಾವಕಾಶ ಕೇಳಲು ಮೂವರು ಮಹಿಳಾ ವಕೀಲರ ಮೂಲಕ ಭವಾನಿ ರೇವಣ್ಣ ಪ್ರಯತ್ನ ನಡೆಸಿದ್ದಾರೆ.
ಆದರೆ ಕಾಲಾವಕಾಶ ನೀಡಲು ಎಸ್ಐಟಿ ಅಧಿಕಾರಿಗಳು ನಿರಾಕರಿಸಿದ್ದು, ವಿಚಾರಣೆಗೆ ಹಾಜರಾದರೆ ಬಂಧನ ಖಚಿತವೆನ್ನುವುದನ್ನು ಅರಿತ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಗಾಗಿ ಕಾಯುತ್ತಿದ್ದಾರೆ. ಹೈಕೋರ್ಟ್ ನಲ್ಲಿ ಇಂದು ಜಾಮೀನು ತಿರಸ್ಕಾರವಾದರೆ ಎಸ್ಐಟಿ ಎದುರು ಶರಣಾಗಲಿದ್ದಾರೆ. ಪುತ್ರ ಪ್ರಜ್ವಲ್ ರೇವಣ್ಣ ಅವರಂತೆ ಎಸ್ಐಟಿ ಮುಂದೆ ಶರಣಾಗಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಮತ್ತೊಂದು ಕಡೆ ಭವಾನಿ ರೇವಣ್ಣ ಅವರಿಗಾಗಿ ಎಸ್ಐಟಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಭವಾನಿಯವರನ್ನು ವಶಕ್ಕೆ ಪಡೆಯಲು ಹಾಸನ, ಮೈಸೂರು ಜಿಲ್ಲೆಯಲ್ಲಿ ಶೋಧ ನಡೆಸಲಾಗಿದೆ. ಭವಾನಿ ರೇವಣ್ಣ ಆಪ್ತರು, ಸಂಬಂಧಿಕರ ಮನೆಯಲ್ಲಿ ತೀವ್ರ ಶೋಧ ನಡೆಸಲಾಗಿದೆ. 15 ದಿನಗಳ ಹಿಂದೆಯೇ ಭವಾನಿ ರೇವಣ್ಣ ಹಾಸನ ತೊರೆದಿದ್ದಾರೆ. ಅವರ ಮೊಬೈಲ್ ಲೊಕೇಷನ್ ಆಧರಿಸಿ ಸುಳಿವು ಪತ್ತೆ ಹಚ್ಚಲು ಎಸ್ಐಟಿ ಅಧಿಕಾರಿಗಳು ಪ್ರಯತ್ನ ನಡೆಸಿದ್ದಾರೆ.