ಹಾಸನ: ಹಾಸನ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶ್ಲೀಲ ವಿಡಿಯೋ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ಕೊನೆಗೂ ವಿಚಾರಣೆಗೆ ಹಾಜರಾಗದ ಕಾರಣ ಹೊಳೆನರಸೀಪುರದಲ್ಲಿ ಭವಾನಿ ರೇವಣ್ಣ ಮನೆ ಎದುರು ಸತತ 7 ಗಂಟೆ ಕಾದ ಎಸ್ಐಟಿ ಅಧಿಕಾರಿಗಳ ತಂಡ ವಾಪಸ್ ತೆರಳಿದೆ.
ಮನೆಯಲ್ಲಿ ಭವಾನಿ ರೇವಣ್ಣ ಇಲ್ಲದ ಕಾರಣ ಅಧಿಕಾರಿಗಳು ವಾಪಸ್ ತೆರಳಿದ್ದಾರೆ. ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ಅವರ ಜಾಮೀನು ಅರ್ಜಿ ವಜಾಗೊಂಡಿತ್ತು. ಹೀಗಾಗಿ ಎಸ್ಐಟಿ ಅಧಿಕಾರಿಗಳು ಭವಾನಿ ರೇವಣ್ಣ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು.
ಬೆಳಿಗ್ಗೆ 11 ಗಂಟೆಗೆ ಮನೆ ಬಳಿ ಬಂದಿದ್ದ ಎಸ್ಐಟಿ ಟೀಂನ ಓರ್ವ ಇನ್ಸ್ ಪೆಕ್ಟರ್ ಹಾಗೂ ಮತ್ತೋರ್ವ ಮಹಿಳಾ ಇನ್ಸ್ ಪೆಕ್ಟರ್ 7 ಗಂಟೆ ಕಾದರೂ ಭವಾನಿ ರೇವಣ್ಣ ವಿಚಾರಣೆಗೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಭವಾನಿ ವಿಚಾರಣೆಗೆ ಹಾಜರಾಗದ ಬಗ್ಗೆ ವರದಿ ತಯಾರಿಸಿ ಎಸ್ಐಟಿ ತಂಡ ಅಲ್ಲಿಂದ ತೆರಳಿದೆ. ಇಂದು ಬೆಳಿಗ್ಗೆ 10 ಗಂಟೆಯಿಂದ 5 ಗಂಟೆ ನಡುವೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಭವಾನಿ ರೇವಣ್ಣ ಅವರಿಗೆ ಎಸ್ಐಟಿ ನೊಟೀಸ್ ನೀಡಿದ್ದು, ಬಂಧನ ಭೀತಿಯಿಂದ ಭವಾನಿ ರೇವಣ್ಣ ವಿಚಾರಣೆಗೆ ಹಾಜರಾಗಿಲ್ಲ.