ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7ರಂದು ಮತದಾನ ನಡೆಯಲಿದೆ. ಗಲ್ಫ್ ರಾಷ್ಟ್ರಗಳಿಂದ ಭಾರತಕ್ಕೆ ಬರುವ ಭಟ್ಕಳದ ಜನರಿಗೆ ಉಚಿತ ವಿಮಾನ ಟಿಕೆಟ್ ನೀಡುವುದಾಗಿ ಅನೇಕ ಮುಸ್ಲಿಂ ಜಮಾತೆಗಳು ಹೇಳಿವೆ.
ಸೌದಿ ಅರೇಬಿಯಾದಲ್ಲಿರುವ ಭಟ್ಕಳ ಮುಸ್ಲಿಂ ಜಮಾತೆ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಉಳಿದ ಅರಬ್ ದೇಶಗಳ ಜಮಾತೆಗಳು ಕೂಡ ಉಚಿತ ಟಿಕೆಟ್ ನೀಡುವ ಬಗ್ಗೆ ಮಾಹಿತಿ ಸಂಗ್ರಹಿಸತೊಡಗಿವೆ. ಸೌದಿ ಅರೇಬಿಯಾದ ರಿಯಾದ್, ದಮಾಮ್, ಜೆಡ್ಡಾದಲ್ಲಿ 1250 ಭಟ್ಕಳ ಮತದಾರರಿದ್ದಾರೆ.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಈ ಬಾರಿ ಕಡಿಮೆಯಾಗಬಾರದು ಎಂದು ನಿರ್ಧರಿಸಿರುವ ಜಮಾತ್ ಗಳು ಒಂದು ಕುಟುಂಬಕ್ಕೆ ಎರಡು ಉಚಿತ ಟಿಕೆಟ್ ಆಫರ್ ನೀಡಿವೆ. ಸೌದಿ ಅರೇಬಿಯಾದ ಭಟ್ಕಳ ಮುಸ್ಲಿಂ ಸಂಘಟನೆಗಳ ನಿರ್ಧಾರದಿಂದ ಉತ್ತೇಜನಗೊಂಡ ದುಬೈನಲ್ಲಿರುವ ಭಟ್ಕಳ ಮುಸ್ಲಿಂ ಜಮಾತ್ ಗಳು ಕೂಡ ಈ ಬಗ್ಗೆ ತಮ್ಮ ಸದಸ್ಯರಿಗೆ ಉಚಿತ ವಿಮಾನ ಟಿಕೆಟ್ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲು ಮುಂದಾಗಿವೆ.
ಭಾರತದಲ್ಲಿ ಈ ಬಾರಿ ನಡೆಯುತ್ತಿರುವ ಲೋಕಸಭೆ ಚುನಾವಣೆಯನ್ನು ಮುಸ್ಲಿಂ ಜಮಾತೆಗಳು ಗಂಭೀರವಾಗಿ ಪರಿಗಣಿಸಿದ್ದು, ವಿದೇಶದಲ್ಲಿ ನೆಲೆಸಿರುವ ಎಲ್ಲಾ ಭಟ್ಕಳ ಮತದಾರರು ಮತದಾನದಲ್ಲಿ ಭಾಗವಹಿಸುವಂತೆ ಕರೆ ನೀಡಲಾಗಿದೆ. ಜಾತ್ಯತೀತ ವ್ಯಕ್ತಿ, ಪಕ್ಷಗಳ ಪರವಾಗಿ ಮತದಾನ ಮಾಡಬೇಕು ಎಂದು ಮತದಾರರಿಗೆ ಮನವಿ ಮಾಡಲಾಗಿದೆ.