ಬೆಂಗಳೂರಿನಲ್ಲಿ ರ್ಯಾಪಿಡೋ ವರ್ಸಸ್ ಕ್ಯಾಬ್/ಆಟೋ ಚಾಲಕರು ಅನ್ನುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ವಿಚಾರವಾಗಿ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಕ್ಯಾಬ್ ಚಾಲಕರು, ರ್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆಯನ್ನ ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿ ಇಂದು ಸಾರಿಗೆ ಸಚಿವ ಶ್ರೀ ರಾಮುಲು ಮನೆ ಮುಂದೆ ಪ್ರತಿಭನಟನೆ ನಡೆಸಿದ್ದಾರೆ.
ಮುಖ್ಯವಾಗಿ ಭಾರತ್ ಟ್ರಾನ್ಸ್ ಪೋರ್ಟ್ ಅಸೋಸಿಯೇಷನ್ ನವರು, ಸೆವೆನ್ ಮಿನಿಸ್ಟರ್ ಕ್ವಾಟ್ರಸ್ ಬಳಿ ಇರುವ ಸಚಿವ ಶ್ರೀರಾಮುಲು ಮನೆ ಮುಂದೆಯೇ ನೂರಾರು ಕ್ಯಾಬ್ ನಿಲ್ಲಿಸಿ ರ್ಯಾಪಿಡೋ ವಿರುದ್ಧ ಪ್ರತಿಭಟನೆ ನಡೆಸಿದ್ರು.
ಪ್ರತಿಭಟನಾಕಾರರ ಮನವಿಯನ್ನು ಆಲಿಸಿದ ಸಾರಿಗೆ ಸಚಿವ ಶ್ರೀರಾಮುಲು, ರ್ಯಾಪಿಡೋ ಬೈಕ್ ಟ್ಯಾಕ್ಸಿ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಚಾಲಕರು ತಮಗೆ ಅನ್ಯಾಯವಾಗ್ತಿದೆ ಎಂದಿದ್ದಾರೆ. ಈ ವಿಷಯವಾಗಿ ಸೋಮವಾರ ಎಲ್ಲಾ ಅಧ್ಯಕ್ಷರು, ಕಾನೂನು ಸಲಹೆಗಾರರನ್ನ ಕರೆದು ಮಾತನಾಡುತ್ತೇನೆ. ಅಂದು ಎಲೆಕ್ಟ್ರಿಕ್ ಬೈಕ್ ಬಗ್ಗೆ ಸಹ ಚರ್ಚಿಸಿತ್ತೇವೆ ಎಂದಿದ್ದಾರೆ.
ಯಾವ ಚಾಲಕರಿಗೂ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುತ್ತೇವೆ. ಕ್ಯಾಬ್ ದುಡಿಮೆಯನ್ನೆ ನಂಬಿ ಜೀವನ ನಡೆಸುತ್ತಿರುವ ಚಾಲಕರ ಸಮಸ್ಯೆ ಬಗೆಹರಿಸುತ್ತೇನೆ. ಬೈಕ್ ಇರುವ ನಿರುದ್ಯೋಗಿಗಳು ಏನೋ ಒಂದು ಲಾಭ ಬರುತ್ತೆ ಅಂತಾ ಬೈಕ್ ಟ್ಯಾಕ್ಸಿ ಕೆಲಸ ಮಾಡ್ತಾರೆ. ಆದ್ರೆ ಇನ್ಮುಂದೆ ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳುತ್ತೇವೆ. ಕಾನೂನುಬಾಹಿರವಾಗಿ ಸೇವೆ ನೀಡುತ್ತಿರುವ ರ್ಯಾಪಿಡೋ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತೆ, ಸೋಮವಾರ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಶ್ರೀರಾಮುಲು, ಕ್ಯಾಬ್ ಚಾಲಕರಿಗೆ ಭರವಸೆ ನೀಡಿದ್ದಾರೆ.