ಬೆಂಗಳೂರು: ಭಾರತ ಐಕ್ಯತಾ ಯಾತ್ರೆ ಈಗ ಆಂದೋಲನವಾಗಿ ಮಾರ್ಪಟ್ಟಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಭಾರತ್ ಜೋಡೋ ಯಾತ್ರೆ ದೇಶದ ರಾಜಕಾರಣವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುತ್ತಿದೆ. ಹಿಂದೆ ಇಂದಿರಾ ಗಾಂಧಿ ಅವರನ್ನು ನೋಡಲು ಲಕ್ಷಾಂತರ ಜನ ಬರುತ್ತಿದ್ದರು. ಇಂದು ರಾಹುಲ್ ಗಾಂಧಿ ನೋಡಲು ಅಪಾರ ಸಂಖ್ಯೆಯ ಜನ ಬಂದಿದ್ದರು. ರಾಹುಲ್ ಗಾಂಧಿ ಭಾರತ ಐಕ್ಯತಾ ಯಾತ್ರೆಯ ವೇಳೆ ಬಡಜನರ ಸಮಸ್ಯೆ ಆಲಿಸಿದ್ದಾರೆ. ರೈತರು, ಕಾರ್ಮಿಕರು, ಯುವಕರು, ಮಹಿಳೆಯರ ಜೊತೆ ಸಂವಾದ ನಡೆಸಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ಸರಕು ಮತ್ತು ಸೇವಾ ತೆರಿಗೆ ಇತರೆ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಎಲ್ಲಾ ವರ್ಗದ, ಜಾತಿ, ಧರ್ಮದ ಮಂದಿರಗಳಿಗೆ ಭೇಟಿ ನೀಡಿದ್ದಾರೆ ಎಂದರು.
ಭಾರತ್ ಜೋಡೋ ಯಾತ್ರೆ ಪರಿಣಾಮದ ಮಾಹಿತಿ ಸಂಗ್ರಹಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ದ್ರುವನಾರಾಯಣ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಯಾತ್ರೆಯ ಪರಿಣಾಮದ ಬಗ್ಗೆ ಪಕ್ಷದ ಮುಖಂಡರ ಜೊತೆಗೆ ಚರ್ಚೆ ನಡೆಸಲಾಗುವುದು. ಯಾತ್ರೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಪ್ರಣಾಳಿಕೆಯಲ್ಲಿ ಸೇರಿಸುತ್ತೇವೆ. ಚುನಾವಣೆ ಪ್ರಣಾಳಿಕೆಯಲ್ಲಿ ಜನರ ಅಭಿಪ್ರಾಯ ಸೇರಿಸುತ್ತೇವೆ ಎಂದು ತಿಳಿಸಿದ್ದಾರೆ.
ಮೇಕೆದಾಟು ಪಾದಯಾತ್ರೆಗೆ ಪ್ಲಾನ್ ಕೊಟ್ಟಿದ್ದೇ ರಾಹುಲ್ ಗಾಂಧಿ. ಫ್ರೀಡಂ ಮಾರ್ಚ್ ಕೂಡ ಕಾಂಗ್ರೆಸ್ ಪಕ್ಷಕ್ಕೆ ಮೈಲುಗಲ್ಲಾಯಿತು. ಸರ್ಕಾರದ 40% ಕಮಿಷನ್ ಆರೋಪ ಹಳ್ಳಿ ಹಳ್ಳಿಗೆ ತಲುಪಿದೆ. ಭಾರತ್ ಜೋಡೋ ಪಾದಯಾತ್ರೆ ಮಾಡಿ ರಾಹುಲ್ ಗಾಂಧಿ ರಾಜ್ಯ ಕಾಂಗ್ರೆಸ್ ಗೆ ಶಕ್ತಿ ಕೊಟ್ಟಿದ್ದಾರೆ ಎಂದರು.