ಪಾಟ್ನಾ: ಅನೇಕ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡು ಹಲವು ಚುನಾವಣೆಗಳಲ್ಲಿ ಪರಾಭವಗೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಬಿಹಾರದಲ್ಲಿ ಮತ್ತೊಂದು ಶಾಕಿಂಗ್ ಸುದ್ದಿ ಎದುರಾಗಿದೆ.
ಕಾಂಗ್ರೆಸ್ ಪಕ್ಷದ 11 ಮಂದಿ ಶಾಸಕರು ಪಕ್ಷದಿಂದ ದೂರವಾಗಲು ಮುಂದಾಗಿದ್ದಾರೆ. ಬಿಹಾರ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಶಾಸಕ ಭರತ್ ಸಿಂಗ್ ಹೀಗೊಂದು ಸುಳಿವು ನೀಡಿದ್ದು, 19 ಶಾಸಕರಲ್ಲಿ 11 ಮಂದಿ ಶಾಸಕರು ಮೂಲತಃ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರಲ್ಲ. ಅವರೆಲ್ಲ ಹಣ ಕೊಟ್ಟು ಟಿಕೆಟ್ ಪಡೆದುಕೊಂಡವರು. ಚುನಾವಣೆಯಲ್ಲಿ ಅವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರೆಲ್ಲ ಪಕ್ಷ ದೊರೆಯಬಹುದಾದ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಪಕ್ಷದ ಘಟಾನುಘಟಿ ನಾಯಕರು ಕೂಡ ಪಕ್ಷವನ್ನು ತೊರೆಯಬಹುದಾದ ಸಾಧ್ಯತೆ ಇದೆ. ಬಿಹಾರದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಭಿನ್ನವಾಗಿದ್ದರೂ, ಪಕ್ಷದ ವರಿಷ್ಠರಿಗೆ ತಪ್ಪು ಮಾಹಿತಿ ನೀಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ನಾನು ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾದಳದ ಮೈತ್ರಿಯ ವಿರುದ್ಧವಾಗಿ ಮೊದಲಿನಿಂದಲೂ ಇದ್ದೇನೆ. ಮೈತ್ರಿಯೇ ನಮ್ಮ ಪಕ್ಷದ ಅವನತಿಗೆ ಕಾರಣವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.