ಬೆಂಗಳೂರು: ಕೆಜಿಗೆ 29 ರೂಪಾಯಿ ಬೆಲೆಯ ಭಾರತ್ ಅಕ್ಕಿಯನ್ನು ವಿವಿಧ ಮಾಲ್ ಗಳಲ್ಲಿ ಮಾರಾಟ ಮಾಡಲು ನ್ಯಾಷನಲ್ ಅಗ್ರಿಕಲ್ಚರ್ ಕೋ ಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ-ನಾಫೆಡ್ ನಿರ್ಧರಿಸಿದೆ.
ರಿಲಯನ್ಸ್ ಮಳಿಗೆಗಳಲ್ಲಿ ಮಾತ್ರ ಸಿಗುತ್ತಿದ್ದ ರಿಯಾಯಿತಿ ದರದ ಅಕ್ಕಿಯನ್ನು ವಿಶಾಲ್ ಮೆಗಾ ಮಾರ್ಟ್, ಸ್ಟಾರ್ ಬಜಾರ್, ಜಿಯೋ ಮಾರ್ಟ್ ಸೇರಿದಂತೆ ಹಲವು ಮಾಲ್ ಗಳಿಗೂ ವಿಸ್ತರಿಸಲಾಗಿದೆ. ಅಲ್ಲದೇ, ಆನ್ಲೈನ್ ಮತ್ತು ಆಫ್ಲೈನ್ ವಿಧಾನದಲ್ಲಿ ಗ್ರಾಹಕರಿಗೆ ಖರೀದಿಸಲು ಅವಕಾಶ ಕಲ್ಪಿಸಿದೆ ಎಂದು ನಾಫೆಡ್ ಕರ್ನಾಟಕ ವಿಭಾಗದ ಮುಖ್ಯಸ್ಥೆ ಜ್ಯೋತಿ ಪಾಟೀಲ್ ತಿಳಿಸಿದ್ದಾರೆ.
ಭಾರತ್ ಅಕ್ಕಿ ಮಾರಾಟಕ್ಕೆ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ಈ ಯೋಜನೆ ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಲ್ಲ. ಕೇಂದ್ರ ಸರ್ಕಾರದ ಯೋಜನೆ ಇದಾಗಿದ್ದು, ಪ್ರಧಾನಿ ಸೇರಿದಂತೆ ಯಾವುದೇ ವ್ಯಕ್ತಿಗಳ ಭಾವಚಿತ್ರ ಚಿಹ್ನೆ ಅಕ್ಕಿಯ ಬ್ಯಾಗ್ ಮೇಲೆ ಬಳಸುತ್ತಿಲ್ಲ ಎಂದು ಹೇಳಿದ್ದಾರೆ.