ವಿರಾಟ್ ಕೊಹ್ಲಿ ಮತ್ತು ಟೀಂ ಇಂಡಿಯಾಕ್ಕೆ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲಿಯೂ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಈ ಅಭಿಮಾನಕ್ಕೆ ಗಡಿಯ ಮಿತಿಯಿಲ್ಲ. ಕ್ರಿಕೆಟ್ನ ಟಿ-20 ಪಂದ್ಯದಲ್ಲಿ ಭಾರತವನ್ನು ಹುರಿದುಂಬಿಸಲು ಆಸ್ಟ್ರೇಲಿಯಾಕ್ಕೆ ಆಗಮಿಸಿದವರ ಪೈಕಿ ವಿವಿಧ ಜನಾಂಗಗಳು ಮತ್ತು ವಿವಿಧ ರಾಷ್ಟ್ರಗಳ ಅಭಿಮಾನಿಗಳೂ ಸೇರಿದ್ದಾರೆ. ವಿದೇಶದಲ್ಲಿ ನೆಲೆಸಿರುವ ಭಾರತೀಯರ ಮಾತು ಒಂದೆಡೆಯಾದರೆ, ವಿದೇಶಿ ಪ್ರಜೆಗಳೂ ಭಾರತವನ್ನು ಅಭಿನಂದಿಸುವುದು ಅಲ್ಲಲ್ಲಿ ಕಂಡುಬರುತ್ತಿದೆ.
ಅಡಿಲೇಡ್‌ನಲ್ಲಿ ಬುಧವಾರ ಬಾಂಗ್ಲಾದೇಶದ ವಿರುದ್ಧ ಟೀಂ ಇಂಡಿಯಾ ರೋಚಕ ಗೆಲುವು ಸಾಧಿಸಿದಾಗ ವಿದೇಶಿಗ ಅಭಿಮಾನಿಗಳು ಉತ್ಸಾಹದಿಂದ ಕೇಕೇ ಹಾಕಿದರು.
ಅಡಿಲೇಡ್ ಓವಲ್‌ನ ಹೊರಗೆ ಚೀನಾದ ವ್ಯಕ್ತಿಯೊಬ್ಬರು ಹಿಂದಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಟೀಂ ಇಂಡಿಯಾವನ್ನು ಹುರಿದುಂಬಿಸುತ್ತಿದ್ದುದು ಕಂಡುಬಂತು. ಭಾರತವನ್ನು ಸದಾ ಶತ್ರುರಾಷ್ಟ್ರದಂತೆ ಕಾಣುವ ಚೀನಾದ ಪ್ರಜೆಯೊಬ್ಬರು ಭಾರತದ ಕ್ರಿಕೆಟ್ ತಂಡವನ್ನು ಅದೂ ಹಿಂದಿಯಲ್ಲಿ ಹುರಿದುಂಬಿಸಿದ್ದಾರೆ.
ಈ ವಿಡಿಯೋವನ್ನು ಹಿರಿಯ ಪತ್ರಕರ್ತ ವಿಮಲ್ ಕುಮಾರ್ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ, ‘ಭಾರತ್ ಮಾತಾ ಕಿ ಜೈ’ ಎಂದು ಹೇಳಿದ ಈ ಚೀನಿಗ, ತಮ್ಮ ನೆಚ್ಚಿನ ಆಟಗಾರ ಕೊಹ್ಲಿ ಎಂಬುದನ್ನು ತಿಳಿಸಿದರು. ಅದರ ವಿಡಿಯೋಗೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.