ರಾಯಚೂರು: ಭಾರಿ ಜನಸ್ತೋಮದ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಬೀಳ್ಕೊಡುಗೆ ನೀಡಲಾಗಿದೆ.
ಕರ್ನಾಟಕದ ವ್ಯಾಪ್ತಿಯಲ್ಲಿ ಭಾರತ್ ಜೋಡೋ ಯಾತ್ರೆ ಇಂದಿಗೆ ಮುಕ್ತಾಯವಾಗಿದ್ದು, ನಾಳೆ ತೆಲಂಗಾಣಕ್ಕೆ ಪ್ರವೇಶಿಸಲಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಯಾತ್ರೆಗೆ ಮೂರು ದಿನ ಬಿಡುವು ನೀಡಲಾಗಿದೆ. ರಾಹುಲ್ ಗಾಂಧಿಯವರಿಗೆ ರಾಯಚೂರಿನ ವಾಲ್ಕಾಟ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಬಿಳ್ಕೊಡುಗೆ ನೀಡಿದ್ದಾರೆ.
ರಾಯಚೂರಿನ ವಾಲ್ಕಟ್ ಮೈದಾನದಲ್ಲಿ ನಡೆದ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕರ್ನಾಟಕದಲ್ಲಿ ಇಂದಿಗೆ ನಮ್ಮ ಪಾದಯಾತ್ರೆ ಮುಕ್ತಾಯವಾಗುತ್ತಿದೆ. ಬಿಸಿಲು, ಮಳೆಯನ್ನು ಲೆಕ್ಕಿಸದೆ ನಾವು ಪಾದಯಾತ್ರೆ ಮಾಡಿದ್ದೇವೆ. ಯಾರೇ ತಡೆದರೂ ನಮ್ಮ ಪಾದಯಾತ್ರೆಯನ್ನು ನಿಲ್ಲಿಸಲು ಆಗುವುದಿಲ್ಲ. ಈ ಪಾದಯಾತ್ರೆ ಜಮ್ಮು ಮತ್ತು ಕಾಶ್ಮೀರ ತಲುಪುತ್ತದೆ ಎಂದರು.
ಕರ್ನಾಟಕದಲ್ಲಿ 500 ಕಿಲೋಮೀಟರ್ ಗೂ ಅಧಿಕ ಪಾದಯಾತ್ರೆ ಮಾಡಿದ್ದೇವೆ. ಯಾತ್ರೆಯ ವೇಳೆ ತಾವು ತೋರಿಸಿದ ಪ್ರೀತಿಗೆ ಧನ್ಯವಾದ ಹೇಳುತ್ತೇನೆ. ಯಾತ್ರೆಯ ವೇಳೆಯಲ್ಲಿ ರೈತರು, ಕಾರ್ಮಿಕರು, ಮಹಿಳೆಯರೊಂದಿಗೆ ಚರ್ಚೆ ನಡೆಸಿದ್ದೇನೆ. ಕೀಟನಾಶಕ ರಸಗೊಬ್ಬರದ ಮೇಲೆಯೂ ಜಿಎಸ್‌ಟಿ ಹಾಕಲಾಗುತ್ತಿದೆ. ಕಾಲ್ನಡಿಗೆ ವೇಳೆಯಲ್ಲಿ ಖುಷಿಯಿಂದ ಇರುವ ಒಬ್ಬ ರೈತನನ್ನು ನೋಡಲಿಲ್ಲ. ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಸಂಕಷ್ಟದಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಆಯ್ಕೆಯಾಗಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅಂದಿನ ಪ್ರಧಾನಿ ವಾಜಪೇಯಿ ಅವರು 371(ಜೆ)ನೇ ವಿಧಿಗೆ ವಿರೋಧ ಮಾಡಿದ್ದರು. ನಮ್ಮ ಸರ್ಕಾರ ಬಂದಾಗ 371ನೇ ಜೆ ವಿಧಿ ಜಾರಿ ಮಾಡಿದ್ದೇವೆ. ಆರ್ಟಿಕಲ್ 371 ಜೆ ಜಾರಿಯಿಂದ ಈ ಭಾಗದ ಜನರಿಗೆ ಅನುಕೂಲವಾಗಿದೆ ಎಂದು ಹೇಳಿದ್ದಾರೆ.
ನಮ್ಮ ತಾಯಿಯವರನ್ನು ಬಳ್ಳಾರಿ ಕ್ಷೇತ್ರದ ಜನ ಗೆಲ್ಲಿಸಿದ್ದರು. ಅವರ ಪ್ರೀತಿಯನ್ನು ಎಂದಿಗೂ ಮರೆಯುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.