ಮುಂಬೈ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶದ ಪೂರ್ವದಿಂದ ಪಶ್ಚಿಮಾಭಿಮುಖವಾಗಿ ಕೈಗೊಂಡಿದ್ದ ಭಾರತ್ ಜೋಡೋ ನ್ಯಾಯ ಯಾತ್ರೆ ಮಾರ್ಚ್ 16ರಂದು ಮುಂಬೈನ ಶಿವಾಜಿ ಪಾರ್ಕ್ ನಲ್ಲಿ ಸಮಾರೋಪಗೊಳ್ಳಲಿದೆ.
ಜನವರಿ 14ರಂದು ಈಶಾನ್ಯ ರಾಜ್ಯ ಮಣಿಪುರದ ಥೌಬಾಲ್ ನಿಂದ ಭಾರತ್ ಜೋಡೋ ನ್ಯಾಯಯಾತ್ರೆ -2 ಆರಂಭವಾಗಿತ್ತು. ಯಾತ್ರೆ 14 ರಾಜ್ಯಗಳಲ್ಲಿ ಹಾದು ಮಹಾರಾಷ್ಟ್ರ ತಲುಪಿದೆ. 66 ದಿನಗಳ ಕಾಲ ಯಾತ್ರೆಯಲ್ಲಿ 15 ರಾಜ್ಯಗಳ 109 ಜಿಲ್ಲೆಗಳಲ್ಲಿ ಸಂಚರಿಸಿದೆ. 6713 ಕಿಲೋಮೀಟರ್ ದೂರ ಸಾಗಿ ಬಂದಿದೆ.
ಲೋಕಸಭೆ ಚುನಾವಣೆಗೆ ದಿನಾಂಕ ಘೋಷಿಸುವ ಸಮಯದಲ್ಲಿ ರಾಹುಲ್ ಗಾಂಧಿಯವರ ಯಾತ್ರೆ ಸಂಪನ್ನಗೊಳ್ಳಲಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೊರತುಪಡಿಸಿ ಇಂಡಿಯಾ ಮೈತ್ರಿಕೂಟದ ನಾಯಕರು ಸಮಾರೋಪದಲ್ಲಿ ಭಾಗವಹಿಸಲಿದ್ದಾರೆ.
ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಎನ್ಸಿಪಿಯ ಶರದ್ ಪವಾರ್, ಆರ್.ಜೆ.ಡಿ.ಯ ತೇಜಸ್ವಿ ಯಾದವ್, ಶಿವಸೇನೆಯ ಉದ್ಧವ್ ಠಾಕ್ರೆ, ಡಿಎಂಕೆಯ ಎಂ.ಕೆ. ಸ್ಟಾಲಿನ್, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಮೊದಲಾದವರು ಶಿವಾಜಿ ಪಾರ್ಕ್ ನ ನಲ್ಲಿ ನಡೆಯುವ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.