ಚೀನಾ, ಜಪಾನ್, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಮಾರಣಾಂತಿಕ ಕೊರೊನಾ ಮಹಾಮಾರಿ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಕೊರೊನಾ ಪರೀಕ್ಷೆಗಳನ್ನು ಹೆಚ್ಚಿಸುವಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಲಾಗಿದ್ದು, ಕೊರೊನಾ ಇನ್ನೂ ಸಂಪೂರ್ಣವಾಗಿ ತೊಲಗಿಲ್ಲ. ಹೀಗಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದೂ ಸೇರಿದಂತೆ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸಾರ್ವಜನಿಕರಿಗೆ ಸಲಹೆ ನೀಡಲಾಗಿದೆ.
ಇದರ ಮಧ್ಯೆ ಭಾರತ್ ಬಯೋಟೆಕ್ ನ ಮೂಗಿನ ಮೂಲಕ ನೀಡುವ ಕೊರೊನಾ ಲಸಿಕೆಗೆ ಔಷಧ ನಿಯಂತ್ರಣ ಪ್ರಾಧಿಕಾರ ಈಗಾಗಲೇ ಅನುಮೋದನೆ ನೀಡಿದ್ದು, 18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಆಗಿ ಇದನ್ನು ನೀಡಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಈ ನಾಸಲ್ ಲಸಿಕೆಗೆ ದರ ನಿಗದಿಪಡಿಸುವ ಕಾರ್ಯ ನಡೆಯುತ್ತಿದ್ದು, ಬಳಿಕ ಸಾರ್ವಜನಿಕರಿಗೆ ಲಭ್ಯವಾಗಲಿದೆ.
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಈಗಾಗಲೇ ಕೋ ವ್ಯಾಕ್ಸಿನ್ ಲಸಿಕೆ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇದೀಗ ಸಿದ್ದಗೊಂಡಿರುವ ನಾಸಲ್ ವ್ಯಾಕ್ಸಿನ್ ಮುಂದಿನ ವಾರದೊಳಗೆ ಲಭ್ಯವಿರುವಂತೆ ನೋಡಿಕೊಳ್ಳಲಾಗುತ್ತದೆ. ಈಗ ಕಂಡು ಬರುತ್ತಿರುವ ಓಮಿಕ್ರಾನ್ ಉಪತಳಿ BF.7 ಗೆ ನಾಸಲ್ ವ್ಯಾಕ್ಸಿನ್ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗಿದೆ. ನಾಸಲ್ ವ್ಯಾಕ್ಸಿನ್ ಮೂರನೇ ಹಂತದ ಪರೀಕ್ಷೆಯೂ ಪೂರ್ಣಗೊಂಡಿದ್ದು, ಫಲಿತಾಂಶ ತೃಪ್ತಿದಾಯಕವಾಗಿದೆ.
ಹೀಗಾಗಿಯೇ ನಾಸಲ್ ವ್ಯಾಕ್ಸಿನ್ ಅನ್ನು 18 ವರ್ಷ ಮೇಲ್ಪಟ್ಟವರಿಗೆ ನೀಡಲು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಜೇಷನ್ (CDSCO) ಹಸಿರು ನಿಶಾನೆ ತೋರಿಸಿದ್ದು, ಇದೀಗ ಕೋವಿನ್ ಪೋರ್ಟಲ್ ಮೂಲಕ ಲಭ್ಯವಾಗಲಿದೆ. ಇದು ಮೂಗಿನ ಮೂಲಕ ನೀಡುವ ಲಸಿಕೆ ಆಗಿರುವುದರಿಂದ ಇದಕ್ಕೆ ಇತರೆ ಲಸಿಕೆ ನೀಡುವಂತೆ ಪರಿಣಿತರ ಅಗತ್ಯವಿರುವುದಿಲ್ಲ. ಹೀಗಾಗಿ ಇದು ಎಲ್ಲರಿಗೂ ಸೂಕ್ತ ಎಂದು ಹೇಳಲಾಗುತ್ತಿದ್ದು, ಬೂಸ್ಟರ್ ಡೋಸ್ ಆಗಿ ಮುಂದಿನ ವಾರದಿಂದ ಲಭ್ಯವಾಗುವ ನಿರೀಕ್ಷೆ ಇದೆ.