ಹೈದರಾಬಾದ್: ಭಾರತ್ ಬಯೋಟೆಕ್ ಕೊರೋನಾ ಲಸಿಕೆ ‘ಕೋವ್ಯಾಕ್ಸಿನ್’ ಮೂರನೇ ಹಂತದ ಪ್ರಯೋಗ ಆರಂಭವಾಗಿದೆ.
ಭಾರತ್ ಬಯೋಟೆಕ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲಾ ಸೋಮವಾರ ಈ ಕುರಿತು ಮಾಹಿತಿ ನೀಡಿದ್ದಾರೆ. ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತ್ ಬಯೋಟೆಕ್ ಕಂಪನಿ ಮತ್ತೊಂದು ಲಸಿಕೆ ಅಭಿವೃದ್ಧಿಪಡಿಸುವಲ್ಲಿ ನಿರತವಾಗಿದೆ. ಇದು ಮೂಗಿನಲ್ಲಿ ಹಾಕವು ಹನಿಗಳ ರೂಪದಲ್ಲಿರುತ್ತದೆ. ಮುಂದಿನ ವರ್ಷದ ವೇಳೆಗೆ ಸಿದ್ಧವಾಗಲಿದೆ ಎಂದು ತಿಳಿಸಿದ್ದಾರೆ.
ಐಸಿಎಂಆರ್ ಜೊತೆಗೆ ಪಾಲುದಾರಿಕೆಯೊಂದಿಗೆ ಕೊರೋನಾ ಲಸಿಕೆಯನ್ನು ಅಭಿವೃದ್ದಿಪಡಿಸುತ್ತಿದ್ದು, ಮೂರನೇ ಹಂತದ ಪ್ರಯೋಗಕ್ಕೆ ಪ್ರವೇಶಿಸಿದೆ. ಬಿಎಸ್ಎಲ್ 3(ಜೈವಿಕ ಸುರಕ್ಷತೆ ಮಟ್ಟ 3) ಉತ್ಪಾದನಾ ಸೌಲಭ್ಯ ಹೊಂದಿರುವ ವಿಶ್ವದ ಏಕೈಕ ಲಸಿಕೆ ಕಂಪನಿ ಭಾರತ್ ಬಯೋಟೆಕ್ ಆಗಿದೆ ಎಂದು ಅವರು ತಿಳಿಸಿದ್ದಾರೆ.
ಒಂದು ಮತ್ತು ಎರಡನೇ ಹಂತದ ಪ್ರಯೋಗಗಳು ಯಶಸ್ವಿಯಾಗಿ ಪೂರ್ಣವಾಗಿವೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್), ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ವೈರಾಲಜಿ ಸಹಯೋಗದಲ್ಲಿ ಕೋವ್ಯಾಕ್ಸಿನ್ ಲಸಿಕೆಯನ್ನು ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸುತ್ತಿದೆ.