ನವದೆಹಲಿ: ಕೇಂದ್ರ ಸರಕಾರದ ಮೂರು ಕೃಷಿ ಕಾನೂನುಗಳ ವಿರುದ್ಧ ಸಿಡಿದೆದ್ದಿರುವ ರೈತರು, ಸೆಪ್ಟೆಂಬರ್ 27ರಂದು ಭಾರತ ಬಂದ್ ಗೆ ಕರೆ ನೀಡಿದ್ದಾರೆ.
ರೈತರ ಆಂದೋಲನಕ್ಕೆ ಬೆಂಬಲ ನೀಡಲು ಕಾಂಗ್ರೆಸ್ ನಿರ್ಧರಿಸಿದೆ.
ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ರೈತರ ಆಂದೋಲನವನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. “ಭಯವಿಲ್ಲದವರು ಮುಂಚೂಣಿಯಲ್ಲಿ. ಆತ ಭಾರತದ ಅದೃಷ್ಟದ ಸೃಷ್ಟಿಕರ್ತ” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಮೊದಲಿನಿಂದಲೂ ರಾಹುಲ್ ಗಾಂಧಿ ರೈತರ ಆಂದೋಲನವನ್ನು ಬೆಂಬಲಿಸುತ್ತಿದ್ದಾರೆ.
ಏತನ್ಮಧ್ಯೆ, ಕಾಂಗ್ರೆಸ್ ಆಂದೋಲನ ಸಮಿತಿಯ ಉಸ್ತುವಾರಿ ದಿಗ್ವಿಜಯ್ ಸಿಂಗ್, “ಕಿಸಾನ್ ಮಹಾಪಂಚಾಯತ್ ಸೆಪ್ಟೆಂಬರ್ 27ರಂದು ಭಾರತ್ ಬಂದ್ ಅನ್ನು ಪ್ರಸ್ತಾಪಿಸಿದೆ. ಬಿಜೆಪಿಯೇತರ ಎಲ್ಲಾ ಪಕ್ಷಗಳೂ ಇದರ ಭರ್ಜರಿ ಯಶಸ್ಸನ್ನು ಸಾಧಿಸಲು ಪ್ರಯತ್ನಿಸಬೇಕು” ಎಂದು ಹೇಳಿದರು.
ಇನ್ನು 15 ರಾಜ್ಯಗಳ 300ಕ್ಕೂ ಹೆಚ್ಚು ರೈತ ಸಂಘಗಳು ಭಾನುವಾರ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ಉತ್ತರ ಪ್ರದೇಶದ ಮುಜಾಫರ್ ನಗರದ ಕಿಸಾನ್ ಮಹಾಪಂಚಾಯತ್ ನಲ್ಲಿ ಭಾಗವಹಿಸಿ, ರೈತ ಒಗ್ಗಟ್ಟಿನ ಶಕ್ತಿ ಪ್ರದರ್ಶಿಸಿದರು.