ಬೆಂಗಳೂರು: ಬೆಲೆ ಏರಿಕೆ, ಕೃಷಿ ಕಾಯ್ದೆ ವಿರೋಧಿಸಿ ಕರೆ ನೀಡಲಾಗಿರುವ ಭಾರತ ಬಂದ್ ಬೆಂಬಲಿಸಿ ವಿವಿಧೆಡೆ ಪ್ರತಿಭಟನೆ ಕೈಗೊಳ್ಳಲಾಗಿದೆ.
ಬೆಳಗಾವಿಯಲ್ಲಿ ಧರಣಿ ನಿರತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 4 ತಡೆದು ಕಾಂಗ್ರೆಸ್ ಕಿಸಾನ್ ಮೋರ್ಚಾ ಕಾರ್ಯಕರ್ತರು ಧರಣಿ ನಡೆಸಿದ್ದು, ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರು -ಪುಣೆ ಹೆದ್ದಾರಿ ತಡೆದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು ಪ್ರತಿಭಟನಾನಿರತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ಭಾರತ ಬಂದ್ ಗೆ ಕರೆ ನೀಡಲಾಗಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ರೈತ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಗಿದೆ. ಎಐಟಿಯುಸಿ, ಕರ್ನಾಟಕ ರಕ್ಷಣಾ ವೇದಿಕೆ ಮತ್ತು ರೈತ ಸಂಘದ ಕಾರ್ಯಕರ್ತರು ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಹಾಸನದಲ್ಲಿ ಅಂಗಡಿ ಹೋಟೆಲ್ ಗಳನ್ನು ಧರಣಿನಿರತರು ಮುಚ್ಚಿಸಿದ್ದಾರೆ. ಬಲವಂತವಾಗಿ ಅಂಗಡಿ, ಹೋಟೆಲ್ ಮುಚ್ಚಿಸಲಾಗಿದೆ. ಭಾರತ ಬಂದ್ ಗೆ ಬೆಂಬಲ ನೀಡುವಂತೆ ಮನವಿ ಮಾಡಲಾಗಿದೆ.
ಮೈಸೂರು ಗ್ರಾಮಾಂತರ ಭಾಗದ ಬಸ್ ಸಂಚಾರಕ್ಕೆ ತಡೆ ನೀಡಲಾಗಿದೆ. ಪ್ರತಿಭಟನೆ ನಿರತರು ಕೆಎಸ್ಆರ್ಟಿಸಿ ಬಸ್ ಸಂಚಾರಕ್ಕೆ ತಡೆಯೊಡ್ಡಿದ್ದಾರೆ. ಭಾರತ ಬಂದ್ ಗೆ ಬೆಂಬಲಿಸುವಂತೆ ಕೋರಿ ಬಸ್ ಸಂಚಾರಕ್ಕೆ ತಡೆಯೊಡ್ಡಿದ್ದು, ಬಸ್ ಟಿಕೆಟ್ ಹಣವನ್ನು ಪ್ರಯಾಣಿಕರಿಗೆ ವಾಪಸ್ ಕೊಡಲಾಗಿದೆ.
ಬೆಂಗಳೂರಿನ ಮೆಜೆಸ್ಟಿಕ್ ನಿಲ್ದಾಣದಿಂದ ಸಾ.ರಾ. ಗೋವಿಂದು ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದೆ.
ಕೊಪ್ಪಳದಲ್ಲಿ ಹೋಟೆಲ್ ಮುಚ್ಚಿಸಲು ಪ್ರಯತ್ನ ನಡೆಸಲಾಗಿದೆ. ನಿಮಗೆ ಅನ್ನ ನೀಡುತ್ತಿರುವ ರೈತರು ಸಂಕಷ್ಟದಲ್ಲಿದ್ದಾರೆ ಅನ್ನದಾತರ ಹೋರಾಟಕ್ಕೆ ಬೆಂಬಲಿಸಿ ಎಂದು ಮನವಿ ಮಾಡಲಾಗಿದೆ.
ಭಾರತ್ ಬಂದ್ ಬೆಂಬಲಿಸಿ ಹೊಸಕೋಟೆಯಲ್ಲಿ ಧರಣಿ ನಡೆಸಲಾಗಿದೆ. ಕೆಪಿಸಿಸಿ ಕಿಸಾನ್ ಕಾಂಗ್ರೆಸ್ ಘಟಕದಿಂದ ಪ್ರತಿಭಟನೆ ನಡೆಸಲಾಗಿದ್ದು, ಟೈಯರ್ ಗೆ ಬೆಂಕಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲ್ಬುರ್ಗಿಯಲ್ಲಿ ಬಸ್ ಸಂಚಾರ ಸ್ಥಗಿತವಾದ ಹಿನ್ನೆಲೆಯಲ್ಲಿ ಪ್ರಯಾಣಿಕರು ಕಂಗಾಲಾಗಿದ್ದಾರೆ. ಬಂದ್ ನಿಂದಾಗಿ ಬಸ್ ಸಂಚಾರ ಸ್ಥಗಿತವಾಗಿದ್ದು, ಗಂಟುಮೂಟೆ ಸಮೇತ ಬಸ್ ನಿಲ್ದಾಣದಿಂದ ಪ್ರಯಾಣಿಕರು ಕಾಲ್ನಡಿಗೆಯಲ್ಲಿ ತೆರಳಿದ್ದಾರೆ.
ಶಿವಮೊಗ್ಗದ ಬಸ್ ನಿಲ್ದಾಣ ಎದುರು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಘೋಷಣೆ ಕೂಗಿದ್ದಾರೆ. ರೈತ ವಿರೋಧಿ ಕೃಷಿ ಕಾಯ್ದೆ ಹಿಂಪಡೆಯಬೇಕು, ಬೆಲೆ ಏರಿಕೆ ತಡೆಯಬೇಕೆಂದು ಒತ್ತಾಯಿಸಿದ್ದಾರೆ.
ಬಂದ್ ನಡುವೆ ಪರೀಕ್ಷೆ:
ದಾವಣಗೆರೆ ವಿಶ್ವವಿದ್ಯಾಲಯದ ಎಲ್ಲ ಪರೀಕ್ಷೆಗಳು ಎಂದಿನಂತೆ ನಡೆಯಲಿವೆ ಎಂದು ಉಪಕುಲಪತಿ ಪ್ರೊ. ಶರಣಪ್ಪ ಹಲಸೇ ತಿಳಿಸಿದ್ದಾರೆ. ಪರೀಕ್ಷೆಯನ್ನು ಮುಂದೂಡುವುದಿಲ್ಲ. ಇಂದು ನಿಗದಿಯಾಗಿದ್ದ ವಿವಿಯ ಎಲ್ಲ ಪರೀಕ್ಷೆಗಳು ನಡೆಯಲಿವೆ ಎಂದು ಹೇಳಲಾಗಿದೆ
ಕೊರೋನಾ ನಡುವೆಯೂ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ನಡೆಸಲಾಗುವುದು. ಇಂದು ಮತ್ತು ನಾಡಿದ್ದು ಪೂರಕ ಪರೀಕ್ಷೆ ನಿಗದಿಯಾಗಿದೆ. ಉಳಿದಂತೆ ಕೆಲವು ವಿವಿ ಪರೀಕ್ಷೆ ಮುಂದೂಡಿದ್ದು, ಮತ್ತೆ ಕೆಲವು ವಿವಿ ಪರೀಕ್ಷೆಗಳು ನಿಗದಿಯಂತೆಯೇ ನಡೆಯಲಿವೆ.