ಬೇಸಿಗೆಯಲ್ಲಿ ಬತ್ತಿ ಹೋಗುವ ಅನೇಕ ಜಲಪಾತಗಳು ಮಳೆಗಾಲದಲ್ಲಿ ಜೀವಕಳೆ ಪಡೆದುಕೊಳ್ಳುತ್ತವೆ. ಜಲಪಾತಗಳನ್ನು ನೋಡಲು ಮಳೆಗಾಲ ಸೂಕ್ತವಾದ ಸಮಯ. ಸುರಿಯುತ್ತಿರುವ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು, ಜಲಪಾತಗಳು ಭೋರ್ಗರೆಯುತ್ತಿವೆ.
ಮಳೆಗಾಲದಲ್ಲಿ ಮೈದುಂಬಿಕೊಳ್ಳುವ ಜಲಪಾತಗಳನ್ನು ನೋಡಲು ಪ್ರವಾಸಿಗರ ದಂಡೇ ನೆರೆದಿರುತ್ತದೆ. ಚಾಮರಾಜನಗರ ಜಿಲ್ಲೆಯ ಶಿವನಸಮುದ್ರದಲ್ಲಿನ ಗಗನಚುಕ್ಕಿ, ಭರಚುಕ್ಕಿ ಜಲಪಾತ ನೋಡುಗರನ್ನು ಸೆಳೆಯುತ್ತದೆ.
ಕಾವೇರಿ ನದಿ ಎರಡು ಕವಲಾಗಿ ಹರಿದು ಗಗನಚುಕ್ಕಿ, ಭರಚುಕ್ಕಿ ಜಲಪಾತಗಳು ಸೃಷ್ಠಿಯಾಗಿವೆ. ಬಂಡೆಯಿಂದ ಧುಮ್ಮಿಕ್ಕುವ ನೀರು ಹಾಲಿನ ನೊರೆಯಂತೆ ಕಾಣುವ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳುವುದೇ ಮನಸಿಗೆ ಮುದ ನೀಡುತ್ತದೆ.
ವಾರಾಂತ್ಯದ ಪ್ರವಾಸಕ್ಕೆ ಇದು ಪ್ರಶಸ್ತವಾದ ಸ್ಥಳವಾಗಿದೆ. ಶಿವನಸಮುದ್ರದಲ್ಲಿನ ಈ ಜಲಪಾತಗಳನ್ನು ನೋಡಲು ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬರುತ್ತಾರೆ. ಹಸಿರ ಸಿರಿಯ ನಡುವೆ, ಧುಮ್ಮಿಕ್ಕುವ ಜಲಪಾತವನ್ನು ಕಣ್ತುಂಬಿಕೊಳ್ಳುತ್ತಾರೆ.
ಶಿವನ ಸಮುದ್ರದ ಸುತ್ತಮುತ್ತ ಇನ್ನೂ ಅನೇಕ ಪ್ರವಾಸಿ ಸ್ಥಳಗಳಿವೆ. ಮೊದಲೇ ಮಾಹಿತಿ ಪಡೆದುಕೊಂಡು ಹೋದರೆ ಅನುಕೂಲವಾಗುತ್ತದೆ.
ಸದಾ ಕೆಲಸದ ಒತ್ತಡದ ನಡುವೆ ಕಾಲ ಕಳೆಯುವವರು ಇಂತಹ ಸ್ಥಳಕ್ಕೆ ಭೇಟಿ ನೀಡಿ ತಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ನೀವೂ ಒಮ್ಮೆ ಗಗನಚುಕ್ಕಿ, ಭರಚುಕ್ಕಿಯ ಜಲಧಾರೆಯ ವೈಭವವನ್ನು ಕಣ್ತುಂಬಿಕೊಳ್ಳಿ.