ಬೆಂಗಳೂರು : ಭಾಗ್ಯಲಕ್ಷ್ಮಿ ಫಲಾನುಭವಿಗಳಿಗೆ ಭರ್ಜರಿ ಸಿಹಿಸುದ್ದಿ, 2024 ರ ಮಾರ್ಚ್ ಗೆ ಮೊದಲ ಕಂತಿನ ಹಣ ಮಾಡಲು ಮಹಿಳಾ ಮತ್ತುಮಕ್ಕಳ ಕಲ್ಯಾಣ ಇಲಾಖೆ ಸಿದ್ಧತೆ ನಡೆಸಿದೆ. ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣು ಮಗುವಿನ ಜನನ ಉತ್ತೇಜಿಸಲು 2006-07ನೇ ಸಾಲಿನಲ್ಲಿ ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಹೆಣ್ಣು ಮಕ್ಕಳ ರಕ್ಷಣೆಗೆ ಭಾಗ್ಯಲಕ್ಷ್ಮಿ ಎಂಬ ಹೊಸ ಯೋಜನೆಯನ್ನು ಜಾರಿಗೊಳಿಸಿತ್ತು.
ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬಗಳಲ್ಲಿ 31.3.2006ರ ನಂತರ ಜನಿಸಿದ ಹೆಣ್ಣು ಮಕ್ಕಳು ಈ ಯೋಜನೆಯಡಿ ಫಲಾನುಭವಿಗಳಾಗಿ ನೋಂದಾಯಿಸಿಕೊಳ್ಳಲು ಆರ್ಹರಿರುತ್ತಾರೆ. ಮಗು ಜನಿಸಿದ ಒಂದು ವರ್ಷದೊಳಗೆ ಜನನ ಪ್ರಮಾಣ ಪತ್ರವನ್ನು ಒದಗಿಸಿ ನೋಂದಾಯಿಸಲು ಅವಕಾಶವಿದೆ. ಯೋಜನೆಯ ಸೌಲಭ್ಯಗಳನ್ನು ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬದ ಇಬ್ಬರು ಹೆಣ್ಣುಮಕ್ಕಳಿಗೆ ಸೀಮಿತಗೊಳಿಸಲಾಗಿದೆ. ಫಲಾನುಭವಿ ಹೆಣ್ಣುಮಗುವಿನ ತಂದೆ ಅಥವಾ ತಾಯಿ ಶಾಶ್ವತ ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡಿರತಕ್ಕದ್ದು ಮತ್ತು ಕುಟುಂಬದಲ್ಲಿ ಮಕ್ಕಳ ಸಂಖ್ಯೆ 3ಕ್ಕಿಂತ ಹೆಚ್ಚಿಗೆ ಇರಬಾರದು.
ನೋಂದಣಿ ನಂತರ ಹಾಗೂ ಪೂರ್ಣ ಪರಿಶೀಲನೆ ನಂತರ ಪ್ರತಿ ಫಲಾನುಭವಿಗೆ ರೂ.10,000/-ಗಳನ್ನು ಆಯ್ಕೆಯಾದ ಪಾಲುದಾರ ಹಣಕಾಸು ಸಂಸ್ಥೆಯಲ್ಲಿ ನಿಶ್ವಿತ ಠೇವಣಿಯನ್ನು ಇಡಲಾಗುತ್ತದೆ. ಪಾಲುದಾರ ಹಣಕಾಸು ಸಂಸ್ಥೆಯು ಹೆಣ್ಣುಮಗುವಿನ ಹೆಸರಿನಲ್ಲಿ ಇಟ್ಟ ರೂ.10,000/-ಗಳ ಠೇವಣಿಯ ಮೇಲಿನ ಆದಾಯವನ್ನು ಗರಿಷ್ಠಗೊಳಿಸಿ, ಠೇವಣಿ ಹಣವನ್ನು ಬಡ್ಡಿ ಸಮೇತವಾಗಿ ಫಲಾನುಭವಿಗಳಿಗೆ 18 ವರ್ಷಗಳು ಪೂರ್ಣಗೊಂಡನಂತರ ದೊರಕಿಸಿಕೊಡುತ್ತದೆ. ರೂ.34751/-ನ್ನು ಮೊದಲ ಮಗುವಿಗೆ ಮತ್ತು ರೂ.40,918/- ನ್ನು ಎರಡನೇ ಮಗುವಿಗೆ ನೀಡಲಾಗುತ್ತದೆ. 2008 ರ ಆಗಸ್ಟ್ ನಂತರ ಜನಿಸಿದ ಮಗುವಿಗೆ ಠೇವಣಿ ಮೊತ್ತವನ್ನು 19,300 ಹೆಚ್ಚಳ ಮಾಡಲಾಗಿದ್ದು, ಈ ಮೂಲಕ ಮೊದಲ ಹೆಣ್ಣು ಮಗುವಿಗೆ 1,00,052 ರೂ. ಎರಡನೇ ಮಗುವಿಗೆ 18,350 ರೂ. ಹೆಚ್ಚಳ ಮಾಡಲಾಗಿದ್ದು, ಒಟ್ಟು 1,00,097 ರೂಪಾಯಿ ಸಿಗಲಿದೆ.
ಹೆಣ್ಣು ಮಗು ಖಾಯಿಲೆ ಬಿದ್ದಲ್ಲಿ, ಆರೋಗ್ಯ ವಿಮೆ ಸೌಲಭ್ಯವನ್ನು ಗರಿಷ್ಠ ರೂ.25,000 ರವರೆಗೆ ನೀಡಲಾಗುವುದು. ವಿಮಾದಾರರು ಸ್ವಾಭಾವಿಕ ಸಾವು ಹೊಂದಿದಲ್ಲಿ ರೂ.42500/- ವಿಮೆ ಹಣ ಒದಗಿಸಲಾಗುವುದು.ವಿಮಾದಾರರು ಅಪಘಾತದಿಂದ ಸತ್ತರೆ ರೂ.1,00,000/- ವಿಮೆ ಹಣವನ್ನು ಕುಟುಂಬಕ್ಕೆ ನೀಡಲಾಗುತ್ತದೆ.