ಬೆಂಗಳೂರು: ಭಾರತದಲ್ಲಿನ ರಸ್ತೆಗಳಲ್ಲಿ ಹೊಂಡಗಳು ಸಾಮಾನ್ಯ ದೃಶ್ಯವಾಗಿದೆ. ಮಳೆಗಾಲದಲ್ಲಂತೂ ಈ ಗುಂಡಿಯ ಗಾತ್ರ ಸ್ವಲ್ಪ ದೊಡ್ಡದಾಗಿರುತ್ತದೆ. ಗುಂಡಿಯಲ್ಲಿ ರಸ್ತೆಯೋ….. ರಸ್ತೆಯಲ್ಲಿ ಗುಂಡಿಯೋ….. ಎಂಬ ಅನುಮಾನ ಮೂಡೋದು ಸಹಜ. ಗುಂಡಿಗಳ ಹಾವಳಿಯಿಂದ ಕಂಗೆಟ್ಟಿರುವ ಸಿಲಿಕಾನ್ ಸಿಟಿ ಬೆಂಗಳೂರಿನ ಜನರು ವಿನೂತನ ಶೈಲಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ತಮ್ಮ ಪ್ರದೇಶದ ರಸ್ತೆಗಳ ಸ್ಥಿತಿಯಿಂದ ಬೇಸತ್ತ ಬೆಂಗಳೂರಿನ ಭಾರತೀನಗರ ನಿವಾಸಿಗಳು ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದ್ದಾರೆ. ಪುರೋಹಿತರ ನೇತೃತ್ವದಲ್ಲಿ ಇಲ್ಲಿನ ನಿವಾಸಿಗಳು ಗುಂಡಿ ಪೂಜೆ ನೆರವೇರಿಸಿದ್ದಾರೆ. ಗುಂಡಿಯಿಂದಾಗಿ ಯಾವುದೇ ವಾಹನ ಸವಾರರಿಗೆ ಅಪಾಯವಾಗದಿರಲಿ ಎಂದು ಪ್ರಾರ್ಥಿಸಿದ್ದಾರೆ.
ರಸ್ತೆ ಗುಂಡಿಗಳಿಗೆ ಪೂಜೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಥಳೀಯ ನಿವಾಸಿಗಳು ಪ್ರದೇಶವನ್ನು ಸುತ್ತುವರೆದಿದ್ದು, ಇಬ್ಬರು ಅರ್ಚಕರು ಗುಂಡಿಯ ಸುತ್ತಲೂ ಪೂಜೆ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಇಡೀ ಗುಂಡಿಯನ್ನು ಅಗರಬತ್ತಿ ಮತ್ತು ಹೂವಿನ ಹಾರಗಳಿಂದ ಅಲಂಕರಿಸಿದರೆ, ಪುರೋಹಿತರು ಮಂತ್ರ ಪಠಿಸುತ್ತಿರುವುದನ್ನು ಕಾಣಬಹುದು.
ಭಾರತೀನಗರ ಒಕ್ಕಲಿಗರ ವೇದಿಕೆಯ ಅಧ್ಯಕ್ಷ ಎನ್‌ಎಸ್ ರವಿ ಮಾತನಾಡಿ, ಈ ರಸ್ತೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಗುಂಡಿಗಳಿದ್ದು, ಜನರು ಸಂಚರಿಸಲು ಪರದಾಡುವಂತಾಗಿದೆ. ಪ್ರತಿದಿನ ಸುಮಾರು 50,000 ಜನರು ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ದ್ವಿಚಕ್ರವಾಹನ ಸವಾರರು ಸ್ಕಿಡ್ ಆಗಿ ಬಿದ್ದಿದ್ದಾರೆ. ಸಣ್ಣಪುಟ್ಟ ಅಪಘಾತಗಳು ಕೂಡ ಸಂಭವಿಸಿವೆ. ಆದರೆ, ಕಳೆದ ಮೂರು ವರ್ಷಗಳಿಂದ ರಸ್ತೆಯನ್ನು ದುರಸ್ತಿ ಮಾಡಿಲ್ಲ ಎಂದು ದೂರಿದ್ದಾರೆ.