ಭದೋಹಿ: ಉತ್ತರಪ್ರದೇಶದ ಭದೋಹಿ ಜಿಲ್ಲೆಯ ಔರಾಯ್ ನಲ್ಲಿರುವ ದುರ್ಗಾಪೂಜಾ ಪೆಂಡಾಲ್ ನಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಇಬ್ಬರು ಸಾವನ್ನಪ್ಪಿದ್ದು, 64 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಭಾರಿ ಬೆಂಕಿಯಲ್ಲಿ 12 ವರ್ಷದ ಬಾಲಕ ಮತ್ತು 45 ವರ್ಷದ ಮಹಿಳೆ ಸುಟ್ಟು ಕರಕಲಾಗಿದ್ದಾರೆ. 64 ಜನರಿಗೆ ಸುಟ್ಟ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ದುರ್ಗಾಪೂಜೆ ಪೆಂಡಾಲ್ ನಲ್ಲಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ 150ಕ್ಕೂ ಹೆಚ್ಚು ಮಂದಿ ನೆರೆದಿದ್ದರು.
ಸ್ಥಳದ ಸಮೀಪ ಹಠಾತ್ ಬೆಂಕಿ ಕಾಣಿಸಿಕೊಂಡು ಇಡೀ ಪೆಂಡಾಲ್ ಗೆ ವ್ಯಾಪಿಸಿದ್ದು, ಕಾಲ್ತುಳಿತ ಉಂಟಾಯಿತು. ಈ ವೇಳೆ ಹೊರ ಬರಲಾರದೆ ಹಲವರಿಗೆ ಸುಟ್ಟ ಗಾಯಗಳಾಗಿವೆ. ಇಬ್ಬರು ಸಾವನ್ನಪ್ಪಿದ್ದಾರೆ. ಪೆಂಡಾಲ್ ನಲ್ಲಿ ಸ್ಥಳಾವಕಾಶ ಕಡಿಮೆ ಇದ್ದು, ಇದರಿಂದ ಜನರು ಕೂಡಲೇ ಹೊರಬರಲು ಸಾಧ್ಯವಾಗಿಲ್ಲ. 12 ವರ್ಷದ ಅಂಕುಶ್ ಸೋನಿ ಮತ್ತು 45 ವರ್ಷದ ಜಯಾ ದೇವಿ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಭದೋಹಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಗೌರಂಗ್ ರಾಠಿ ತಿಳಿಸಿದ್ದಾರೆ.
ವಾರಣಾಸಿಯಲ್ಲಿ 42, ಪ್ರಯಾಗ್ ರಾಜ್ ನಲ್ಲಿ ನಾಲ್ವರು ಮತ್ತು ಇತರರು ಭದೋಹಿಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತನಿಖೆಗಾಗಿ ಎಸ್‌ಐಟಿ ತಂಡವನ್ನು ರಚಿಸಲಾಗಿದ್ದು, ಅವರು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.